ಮಾದಕ ದ್ರವ್ಯ ಪೀಡಿತೆ  ಎಂದು ವೈರಲ್ ಆಗುತ್ತಿರುವ ಯುವತಿ ಮಾದಕ ವ್ಯಸನಿ ಅಲ್ಲ: ಇಲ್ಲಿದೆ ಮಾಹಿತಿ - Mahanayaka

ಮಾದಕ ದ್ರವ್ಯ ಪೀಡಿತೆ  ಎಂದು ವೈರಲ್ ಆಗುತ್ತಿರುವ ಯುವತಿ ಮಾದಕ ವ್ಯಸನಿ ಅಲ್ಲ: ಇಲ್ಲಿದೆ ಮಾಹಿತಿ

kaddri police
10/09/2023


Provided by

ಮಂಗಳೂರು: ಕದ್ರಿ (ಮಂಗಳೂರು ಪೂರ್ವ) ಠಾಣೆಯಲ್ಲಿ ಮಾದಕ ದ್ರವ್ಯ ಪೀಡಿತೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ದಿನಾಂಕ 1—09—2023ರಂದು ಬೆಳಗ್ಗೆ 6:50ರ ಸುಮಾರಿಗೆ ಮಂಗಳೂರು ನಗರದ ಪಂಪ್ ವೆಲ್ ನಲ್ಲಿರುವ ಗಣೇಶ ಮೆಡಿಕಲ್ ಬಳಿಯಲ್ಲಿ ಯುವತಿಯೊಬ್ಬಳು ಅಸಮಾನ್ಯ ಹಾಗೂ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಳು. ಆಕೆಯನ್ನು ಮಾದಕ ದ್ರವ್ಯ ಸೇವಿಸಿರಬಹುದು ಎಂಬ ಶಂಕೆಯಿಂದ ಅಬಕಾರಿ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋದಾಗ ಅಧಿಕಾರಿಗಳ ಮೇಲೆಯೂ ಆಕ್ರಮಣಕಾರಿಯಾಗಿ ವರ್ತಿಸಿದ್ದಳು.

ಈ ವೇಳೆ ಅಬಕಾರಿ ಇಲಾಖಾ ವಾಹನದಲ್ಲಿ ಹೆಚ್ಚಿನ ಸಹಾಯ ಕೋರಿ ಕದ್ರಿ ಪೊಲೀಸ್ ಠಾಣೆಗೆ ಯುವತಿಯನ್ನು ಕರೆತಂದಿದ್ದಾರೆ. ಈ ವೇಳೆ ಮಹಿಳಾ ಸಿಬ್ಬಂದಿ ಜೊತೆಗೆ ಯುವತಿ  ಆಕ್ರಮಣಕಾರಿಯಾಗಿ ವರ್ತಿಸಿದ್ದಾಳೆ. ಆ ಬಳಿಕ ಆಕೆಗೆ ವೈದ್ಯಕೀಯ ಪರೀಕ್ಷೆ ನಡೆಸಿದ ವೇಳೆ ಆಕೆ ಯಾವುದೇ ಮಾದಕ ದ್ರವ್ಯ ಸೇವಿಸಿರಲಿಲ್ಲ ಎನ್ನುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈದ್ಯಕೀಯ ಪರೀಕ್ಷೆಯ ನಂತರ ಯುವತಿಯನ್ನು ಆಕೆಯ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಯುವತಿ ಉದ್ರೇಕಕಾರಿಯಾಗಿ ವರ್ತಿಸಿರುವ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ವೈರಲ್ ಆಗಿದ್ದು ಹೇಗೆ?

ಯುವತಿಯನ್ನು ಪೊಲೀಸ್ ಠಾಣೆಗೆ ಕರೆ ತಂದ ವೇಳೆ ಯುವತಿ ಪೊಲೀಸರ ಮೇಲೆ ಆಕ್ರಮಣ ಮಾಡುವುದು ಮತ್ತು ಪೊಲೀಸರು ಆಕೆಯನ್ನು ನಿಯಂತ್ರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಾದಕ ವ್ಯಸನಿ ಎಂಬ ಶೀರ್ಷಿಕೆಯಲ್ಲಿ ಜನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಇದೀಗ ಯುವತಿ ಮಾದಕ ವ್ಯಸನಿ ಆಗಿರಲಿಲ್ಲ ಎನ್ನುವುದು ವೈದ್ಯಕೀಯ ಪರೀಕ್ಷೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಮಾಡಲಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ವೈರಲ್ ಆಯಿತು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಮಾದಕ ವ್ಯಸನಿ ಅಲ್ಲದ ಯುವತಿಯ ವಿಡಿಯೋ ಇದೀಗ ಮಾದಕ ವ್ಯಸನಿ ಎಂಬ ಹಣೆಪಟ್ಟಿಯೊಂದಿಗೆ ವೈರಲ್ ಆಗುತ್ತಿದೆ. ಇದು ನಿರ್ಲಕ್ಷ್ಯತನವಲ್ಲವೇ ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ