ಸ್ವಾಮೀಜಿಯ ಬಂಧನವಾಗಲಿ. ದೊಡ್ಡ ದೊಡ್ಡವರ ಹೆಸರು ಹೊರಬರುತ್ತದೆ: ಚೈತ್ರಾ ಕುಂದಾಪುರ

ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಸೇರಿದಂತೆ ಇತರ ಆರೋಪಿಗಳನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ. ಈ ಪ್ರಕರಣದ ಮತ್ತೋರ್ವ ಆರೋಪಿಯಾಗಿರುವ ಹೊಸಪೇಟೆ ಜಿಲ್ಲೆಯ ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಶ್ರೀ ಹಾಲುಶ್ರೀಸ್ವಾಮೀಜಿ ತಲೆಮರೆಸಿಕೊಂಡಿದ್ದಾರೆ.
ಈ ನಡುವೆ ಸಿಸಿಬಿ ಕಚೇರಿ ಮುಂದೆ ಪೊಲೀಸ್ ವಾಹನದಿಂದ ಇಳಿಯುತ್ತಿದ್ದಂತೆಯೇ ಮಾಧ್ಯಮಗಳ ಜೊತೆಗೆ ಮಾತನಾಡಿದ ಚೈತ್ರಾ ಕುಂದಾಪುರ, ಸ್ವಾಮೀಜಿಯ ಬಂಧನವಾಗಲಿ ಆಗ ಎಲ್ಲ ಸತ್ಯ ಹೊರ ಬರುತ್ತದೆ. ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗ ಆಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್ ಬಿಲ್ ಗಾಗಿ ಈ ರೀತಿಯ ಷಡ್ಯಂತ್ರ ನಡೆದಿದೆ ಎಂದು ಚೈತ್ರಾ ಕುಂದಾಪುರ ಆರೋಪಿಸಿದರು. ಚೈತ್ರಾ ಕುಂದಾಪುರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದ್ದರೂ, ಕೇವಲ ಚೈತ್ರಾ ಮಾತ್ರವಲ್ಲದೇ ಇದರಲ್ಲಿ ದೊಡ್ಡದೊಡ್ಡವರು ಇದ್ದಾರೆ ಎನ್ನುವ ಅನುಮಾನಗಳು ಇದೀಗ ಬಲವಾಗುತ್ತಿದೆ. ಚೈತ್ರಾಳನ್ನು ಮುಂದೆ ಬಿಟ್ಟು ದೊಡ್ಡ ದೊಡ್ಡವರು ಡೀಲ್ ಮಾಡಿದ್ರಾ? ಎನ್ನುವ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹಾಲುಶ್ರೀ ಸ್ವಾಮೀಜಿಯ ಬಂಧನ ಇನ್ನೂ ಆಗಿಲ್ಲ ಎನ್ನುವುದು ತಿಳಿಯುತ್ತಿದ್ದಂತೆಯೇ ಪ್ರಕರಣವನ್ನು ಸ್ವಾಮೀಜಿಯ ತಲೆಗೆ ಹಾಕಲು ಚೈತ್ರಾ ಪ್ರಯತ್ನಿಸಿದ್ರಾ? ಅಥವಾ ನಿಜವಾಗಿಯೂ ಈ ಪ್ರಕರಣದಲ್ಲಿ ದೊಡ್ಡ ದೊಡ್ಡವರು ಶಾಮೀಲಾಗಿದ್ದಾರಾ? ಎನ್ನುವ ಹತ್ತು ಹಲವು ಪ್ರಶ್ನೆಗಳು ಸೃಷ್ಟಿಯಾಗಿದ್ದು, ಸಿಸಿಬಿ ಪೊಲೀಸರ ತನಿಖೆಯ ನಂತರವೇ ಸತ್ಯಾಸತ್ಯತೆಗಳು ಬಯಲಿಗೆ ಬರಬೇಕಿದೆ.