ಚೈತ್ರಾ ಪ್ರಕರಣಕ್ಕೆ ಹೊಸ ತಿರುವು: “ನಾನು ಕಬಾಬ್ ಮಾರುವವನಲ್ಲ” ಎಂದ ವಿಶ್ವನಾಥ್ ಜೀ ಪಾತ್ರಧಾರಿ!

ಬೆಂಗಳೂರು: ಹಿಂದೂ ಪರ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಂಚನೆ ತಂಡದಲ್ಲಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ನಾಯಕನ ಪಾತ್ರಧಾರಿಯಾಗಿದ್ದ ಬಿ.ಎಲ್.ಚೆನ್ನನಾಯ್ಕ್ ಅಲಿಯಾಸ್ ಕಬಾಬ್ ನಾಯ್ಕ್ ಸ್ಪಷ್ಟನೆ ನೀಡಿದ್ದು,”ನಾನು ಕಬಾಬ್ ಮಾರುವನಲ್ಲ, ಫ್ಯಾಬ್ರಿಕೇಷನ್, ವೆಲ್ಡಿಂಗ್ ಹಾಗೂ ಸಿವಿಲ್ ಕಾಂಟ್ರಾಕ್ಟ್ ಕೆಲಸ ಮಾಡುತ್ತೇನೆ. ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಹೆಸರಿನ ವಂಚನೆ ಕೃತ್ಯದಲ್ಲಿ ನಾನು ತಪ್ಪು ಮಾಡಿಲ್ಲ..!” ಎಂದಿದ್ದಾನೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,”ನಾನು ಕಬಾಬ್ ಮಾರಾಟ ಮಾಡುವುದಿಲ್ಲ. ಕೆ.ಆರ್.ಪುರದಲ್ಲೂ ನೆಲೆಸಿಲ್ಲ. ನನ್ನೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣವಾಗಿದೆ. ಕಡೂರಿನಲ್ಲೇ ನೆಲೆಸಿದ್ದೇನೆ” ಎಂದಿದ್ದಾನೆ.
ಅಲ್ಲದೆ ”ಪೂಜಾರಿ ಅವರನ್ನು ನಾನು ಮೂರೇ ನಿಮಿಷ ಭೇಟಿಯಾಗಿದ್ದು, ನಾನು ಅವರಿಗೆ ವಂಚಿಸಿಲ್ಲ. ನನಗೆ ಚೈತ್ರಾ ಕುಂದಾಪುರ ಕಡೆಯಿಂದ 93 ಸಾವಿರ ರೂ. ಸಂದಾಯವಾಗಿತ್ತು” ಎಂದು ಹೇಳಿದ್ದಾನೆ.
ಈ ಸುದ್ದಿಗೋಷ್ಠಿ ನಡೆದ ಕೆಲವೇ ನಿಮಿಷಗಳಲ್ಲಿ ನಾ ಯ್ಕ್ನನ್ನು ಸಿಸಿಬಿ ಪೊಲೀಸರು ಬಂಧಿಸಿದರು. ”ನಾನು ತಪ್ಪಿಸಿಕೊಂಡು ಹೋಗಿಲ್ಲ. ಚೈತ್ರಾ, ಗಗನ್ ಅವರೆಲ್ಲರ ಬಳಿ ನನ್ನ ನಂಬರ್ ಇದೆ. ಗೋವಿಂದ ಪೂಜಾರಿ ಅವರ ಬಳಿ ಸಹ ನನ್ನ ನಂಬರ್ ಇದೆ. ಹೀಗಿದ್ದರೂ ಯಾಕೆ ಅವರು ನನ್ನ ನಂಬರ್ ಅನ್ನು ಸಿಸಿಬಿಗೆ ಕೊಟ್ಟಿಲ್ಲ? ಪೂಜಾರಿ ಅವರೇ ನನಗೆ ಕರೆ ಮಾಡಿ ಅಲ್ಲಿ ಏನಾಗುತ್ತಿದೆ ಎಂಬುದನ್ನು ವಿಡಿಯೋ ಮಾಡಿ ಕಳುಹಿಸುವಂತೆ ಕೋರಿದ್ದರು.
ಆಗ ನಾನು ನಿಮ್ಮ ದುಡ್ಡಿನ ವ್ಯವಹಾರ ನನಗೆ ಗೊತ್ತಿಲ್ಲ. ನಾನು ಚೈತ್ರಾ ಹಾಗೂ ಗಗನ್ ಅವರಿಗೆ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದೆ. ನಾನು ಪೂಜಾರಿ ಅವರಿಗೆ ಹಣದ ವ್ಯವಹಾರಕ್ಕೆ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ಸಹ ಎಚ್ಚರಿಸಿದ್ದೆ” .ನಾನು ಕಡೂರಿನಲ್ಲೇ ವೆಲ್ಡಿಂಗ್ ವರ್ಕ್, ಹಾಗೂ ಸಿವಿಲ್ ಕಂಟ್ರಾಕ್ಟ್ ಕೆಲಸ ಮಾಡುತ್ತಿದ್ದೆ. ಒಂದೂವರೆ ತಿಂಗಳ ಹಿಂದಷ್ಟೇ ಬೆಂಗಳೂರಿನ ಪೀಣ್ಯಕ್ಕೆ ಬಂದು ನೆಲೆಸಿದ್ದೇನೆ ಎಂದು ಅವರು ಹೇಳಿದರು.
ನನಗೆ ಚೈತ್ರಾ ನೇರ ಪರಿಚಯವಿರಲಿಲ್ಲ. ಮೊದಲಿನಿಂದ ಕಡೂರಿನ ಧನರಾಜ್ ಹಾಗೂ ಗಗನ್ ರವರ ಪರಿಚಯವಿತ್ತು. 2017ರಲ್ಲಿ ಆನಂದರಾವ್ ಸರ್ಕಲ್ ನಲ್ಲಿ ಪ್ರತಿಭಟನೆ ಮಾಡಿದ್ದ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಚೈತ್ರಾ ನೋಡಿದ್ದರಂತೆ. ನನಗೆ ರಾಜಕೀಯ ಹುಚ್ಚಿದ್ದು, ಸಾಕಷ್ಟು ಹಣ ಕಳೆದುಕೊಂಡಿದ್ದೇನೆ. ನನಗೆ ನಮ್ಮ ಪರಿಚಿತರಿಗೆ ಟಿಕೆಟ್ ಕೊಡಿಸಲು ನೀನು ನೆರವು ನೀಡಬೇಕು ಎಂದು ಗಗನ್ ಹಾಗೂ ಧನರಾಜ್ ಹೇಳಿದ್ದರು. ಆದರೆ ಅವರ ಯೋಗ್ಯತೆ ನನಗೆ ಗೊತ್ತಿತ್ತು. ಗಗನ್ 30 ರುಪಾಯಿ ಮೇಲೆ ಪೆಟ್ರೋಲ್ ಹಾಕಿಸುತ್ತಿರಲಿಲ್ಲ. ಧನರಾಜ್ 20 ರುಪಾಯಿ ಗಿರಾಕಿಯಾಗಿದ್ದ.ಆಗ ಲೇಡಿಸ್ ಒಬ್ಬರು ಟಿಕೆಟ್ ಕೊಡಿಸುತ್ತಾರೆ ಎಂದಿದ್ದರು.
ನಾನು ಜಗದೀಶ್ ಶೆಟ್ಟರ್, ಈಶ್ವರಪ್ಪನಂತಹವರಿಗೇ ಟಿಕೆಟ್ ಸಿಗುತ್ತಿಲ್ಲ. ಅಂಥದರಲ್ಲಿ ಹೊಸ ಮುಖಕ್ಕೆ ಹೇಗೆ ಟಿಕೆಟ್ ಕೊಡಿಸುತ್ತೀರಾ ಎಂದು ಪ್ರಶ್ನಿಸಿದೆ. ಆಗ ಚೈತ್ರಾ ಕುಂದಾಪುರ ಕೊಡಿಸುತ್ತಾರೆ ಎಂದಿದ್ದರು. ಎರಡು ದಿನಗಳ ಬಳಿಕ ಕಡೂರಿನಲ್ಲಿ ಚೈತ್ರಾ ಭೇಟಿಯಾದರು. ನಿಮ್ಮ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ನೋಡಿದ್ದೀನಿ ಎಂದು ಹೇಳಿದರು. ಗೋವಿಂದ ಪೂಜಾರಿ ಅವರನ್ನು ಎಂಎಲ್ ಎ ಮಾಡಿಸುತ್ತೇನೆ. ಶೋಭಾ ಕರಂದ್ಲಾಜೆ ಅವರು ಡಮ್ಮಿ. ಯಡಿಯೂರಪ್ಪ ಇರುವಷ್ಟು ದಿನಗಳು ಅಷ್ಟೇ ಶೋಭಾ. ಮುಂದೆ ಅವರ ಸ್ಥಾನಕ್ಕೆ ನಾನು ಬರುತ್ತೇನೆ ಎಂದು ಚೈತ್ರಾ ಹೇಳಿದ್ದರು. ನನಗೆ ಹಿಂದಿಯಲ್ಲಿ ಮಾತನಾಡುವಂತೆ ಚೈತ್ರಾ ಸೂಚಿಸಿದರು. ಗೋವಿಂದ ಪೂಜಾರಿ ಅವರು ಮುಂಬೈನಲ್ಲಿದ್ದವರು. ವಿಶ್ವನಾಥ್ ಜೀ ಅವರನ್ನೇ ಸೃಷ್ಟಿಸಿದ್ದೇವೆ. ಜೀ ಅನ್ನುವ ಪದವನ್ನು ಜಾಸ್ತಿ ಬಳಸಬೇಕು. ನನಗೆ 1 ಲಕ್ಷ ರು. ನೀಡುವಂತೆ ಚೈತ್ರಾ ಹೇಳಿದ್ದರು. ಕಡೂರಿನ ಎಪಿಎಂಸಿ ಮಾರುಕಟ್ಟೆ ಬಳಿ ನನಗೆ ಗಗನ್ 93 ಸಾವಿರ ರು. ನೀಡಿದ. ಇನ್ನುಳಿದ 7 ಸಾವಿರ ರು. ಅನ್ನು ಆತನೇ ಪಡೆದಿದ್ದ ಎಂದಿದ್ದಾನೆ.