ಛತ್ತೀಸ್ ಗಢದಲ್ಲಿ ರೈಲಿನಲ್ಲಿ ಪ್ರಯಾಣಿಸಿದ ರಾಹುಲ್ ಗಾಂಧಿ: ರೈಲ್ವೇ ಪ್ರಯಾಣಿಕರ ಸಮಸ್ಯೆ ಆಲಿಸಿದ ರಾಗಾ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಬಿಲಾಸ್ ಪುರದಿಂದ ಛತ್ತೀಸ್ ಗಢದ ರಾಯ್ ಪುರಕ್ಕೆ ರೈಲಿನಲ್ಲಿ ಪ್ರಯಾಣಿಸಿದರು. ಕಳೆದ ಕೆಲವು ತಿಂಗಳುಗಳಲ್ಲಿ ರೈಲ್ವೆ ಸಚಿವಾಲಯವು ರಾಜ್ಯದಲ್ಲಿ 2,600 ರೈಲುಗಳನ್ನು ರದ್ದುಗೊಳಿಸಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ಪದೇ ಪದೇ ಆರೋಪಿಸಿದೆ. ಇದು ಜನರಿಗೆ ತೀವ್ರ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಬಿಲಾಸ್ ಪುರ ಜಿಲ್ಲೆಯ ತಖತ್ಪುರ ಅಭಿವೃದ್ಧಿ ಬ್ಲಾಕ್‌ನ ಪರ್ಸಾಡಾ (ಸಕ್ರಿ) ಗ್ರಾಮದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮವಾದ ‘ಆವಾಸ್ ನ್ಯಾಯ್ ಸಮ್ಮೇಳನ್’ ನಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು.
ಮುಖ್ಯಮಂತ್ರಿ ಭೂಪೇಶ್ ಬಘೇಲ್, ಪಕ್ಷದ ರಾಜ್ಯ ಉಸ್ತುವಾರಿ ಕುಮಾರಿ ಸೆಲ್ಜಾ ಮತ್ತು ರಾಜ್ಯ ಘಟಕದ ಮುಖ್ಯಸ್ಥ ದೀಪಕ್ ಬೈಜ್ ಅವರೊಂದಿಗೆ ರಾಹುಲ್ ಗಾಂಧಿ ಬಿಲಾಸ್ ಪುರದಿಂದ ಇಂಟರ್ ಸಿಟಿ ರೈಲಿನಲ್ಲಿ ಪ್ರಯಾಣಿಸಿದರು. ಇದರ ಫೋಟೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ. ರಾಹುಲ್ ಗಾಂಧಿ ಪ್ರಯಾಣಿಕರೊಂದಿಗೆ ಮಾತುಕತೆ ಮಾಡಿ ಮಾಹಿತಿ ವಿನಿಮಯ ಮಾಡಿಕೊಂಡರು.
ಬಿಲಾಸ್ ಪುರದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಲಿದೆ ಏಕೆಂದರೆ ಅಂತಹ ಪ್ರಕ್ರಿಯೆಯು ಒಬಿಸಿಗಳು, ದಲಿತರು, ಬುಡಕಟ್ಟು ಜನಾಂಗದವರು ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದರು. ನರೇಂದ್ರ ಮೋದಿ ಸರ್ಕಾರವು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆಸಿದ ‘ಜಾತಿ ಜನಗಣತಿ’ಯ ವಿವರಗಳನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಅವರು ಪ್ರಶ್ನಿಸಿದರು ಮತ್ತು ಅಂತಹ ಪ್ರಕ್ರಿಯೆಗೆ ಪ್ರಧಾನಿ ಹೆದರುತ್ತಾರೆಯೇ ಎಂದು ಕೇಳಿದರು.




























