ಇದು ಕನ್ನಡಿಗರ ಸರಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರಕಾರವೋ?: ಕುಮಾರಸ್ವಾಮಿ ವಾಗ್ದಾಳಿ - Mahanayaka
11:14 AM Thursday 21 - August 2025

ಇದು ಕನ್ನಡಿಗರ ಸರಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರಕಾರವೋ?: ಕುಮಾರಸ್ವಾಮಿ ವಾಗ್ದಾಳಿ

hd kumarasawamy
26/09/2023


Provided by

ಬೆಂಗಳೂರು: ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಪೂರ್ಣ ವೈಫಲ್ಯವಾಗಿರುವ ರಾಜ್ಯ ಕಾಂಗ್ರೆಸ್ ಸರಕಾರವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಕಾಂಗ್ರೆಸ್ ಸರಕಾರ ಕನ್ನಡಿಗರ ಸರಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರಕಾರವೋ? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ; ಕಾಂಗ್ರೆಸ್ ಪಕ್ಷವು ತಮಿಳುನಾಡಿನ ಡಿಎಂಕೆ ಪಕ್ಷದ ಬಿ ಟೀಂ ಎಂದು ಟಾಂಗ್ ನೀಡಿದ್ದಾರೆ ಅವರು.

ಕಾವೇರಿ ಹೋರಾಟವನ್ನು ಹತ್ತಿಕ್ಕುತ್ತಿರುವ ಸರಕಾರದ ಕ್ರಮವನ್ನು ಚೋದ್ಯ ಎಂದು ಟೀಕಿಸಿರುವ ಅವರು; ಒಂದು ಕಡೆ ಮೇಕೆದಾಟು ಬೇಕು ಎಂದು ಪಾದಯಾತ್ರೆ ಮಾಡಿದವರು, ಇಂದು ಕಾವೇರಿ ನೀರಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ರೈತರನ್ನು, ಹೋರಾಟಗಾರರನ್ನು ಬಂಧಿಸಿದ್ದಾರೆ. ರಾತ್ರೋರಾತ್ರಿ ಹೋರಾಟಗಾರರನ್ನು ಬಂಧಿಸಿರುವುದು ಸರಕಾರದ ಕಿಡಿಗೇಡಿತನದ ಪರಮಾವಧಿ. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಒಂದು ನ್ಯಾಯ, ಕನ್ನಡಿಗರಿಗೆ ಇನ್ನೊಂದು ನ್ಯಾಯ ಎನ್ನುವುದು ಇದೆಯಾ? ಎಂದು ಕೇಳಿದ್ದಾರೆ.

ಕೋವಿಡ್ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಮಾಡಬಹುದಾದರೆ, ನಾಡಿನ ಜೀವನಾಡಿ ಕಾವೇರಿಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಬಾರದೇ? ಶಾಂತವಾಗಿ ಹೋರಾಟ ನಡೆಸುತ್ತಿದ್ದ ರೈತರು, ಹೋರಾಟಗರನ್ನು ಬಂಧಿಸಿರುವುದು ಖಂಡನೀಯ. ಇದೇನು ಕನ್ನಡಿಗರ ಸರಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರಕಾರವೋ? ಕನ್ನಡಿಗರು ಮತ ಹಾಕಿದ್ದು ಯಾರಿಗೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.

ಹೋರಾಟಗಾರರು, ರೈತರನ್ನು ಕೂಡಲೇ ಬಂಧಮುಕ್ತಗೊಳಿಸಬೇಕು. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಪಕ್ಷವು ಡಿಎಂಕೆ ಪಕ್ಷದ ಬಿ ಟೀಂ ಆಗಿ ಪರಿವರ್ತನೆ ಆದ ಪರಿಣಾಮವೇ ಈ ಕಾವೇರಿ ಬಿಕ್ಕಟ್ಟು ಎನ್ನುವುದು ಕನ್ನಡಿಗರಿಗೆ ಅರ್ಥವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಇತ್ತೀಚಿನ ಸುದ್ದಿ