ಈದ್ ಮೀಲಾದ್ ರಜೆ ಪೋಸ್ಟರ್ ವಿಚಾರ: ಹೊರಗಿನವರು ಯಾರೂ ಶಾಂತಿ ಕದಡುವ ಪ್ರಯತ್ನ ಮಾಡಬೇಡಿ: ಮೀನು ವ್ಯಾಪಾರಸ್ಥರ ಸಂಘ ಸ್ಪಷ್ಟನೆ - Mahanayaka
11:47 PM Saturday 23 - August 2025

ಈದ್ ಮೀಲಾದ್ ರಜೆ ಪೋಸ್ಟರ್ ವಿಚಾರ: ಹೊರಗಿನವರು ಯಾರೂ ಶಾಂತಿ ಕದಡುವ ಪ್ರಯತ್ನ ಮಾಡಬೇಡಿ: ಮೀನು ವ್ಯಾಪಾರಸ್ಥರ ಸಂಘ ಸ್ಪಷ್ಟನೆ

mangalore
27/09/2023


Provided by

ದಕ್ಷಿಣ ಕನ್ನಡ:  ಹಸಿ ಮೀನು ವ್ಯಾಪಾರಸ್ಥರ ಈದ್ ಮೀಲಾದ್ ರಜೆ ಕುರಿತಾದ ಪೋಸ್ಟರ್ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘ, ಮಂಗಳೂರು ಟ್ರಾಲ್ ಬೋಟ್, ಹಸಿಮೀನು ವ್ಯಾಪಾರಸ್ಥರು, ಒಣ ಮೀನು ವ್ಯಾಪಾರಸ್ಥರು, ಸೀ ಫುಡ್ ಬಯ್ಸರ್ ಅಸೋಸಿಯೇಶನ್, ಮಂಗಳೂರು ಹಸಿ ಮೀನು ಕಮಿಶನ್ ಏಜೆಂಟರ ಸಂಘ, ದ.ಕ. ಜಿಲ್ಲಾ ಗಿಲ್ ನೆಟ್ ಮೀನುಗಾರರ ಸಂಘಗಳ ಪ್ರತಿನಿಧಿಗಳ ಪರವಾಗಿ ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಫ್ಲೆಕ್ಸ್, ಬ್ಯಾನರ್ ಅಳವಡಿಸುವುದು ಇದೇ ಮೊದಲಲ್ಲ. ಪ್ರತೀ ವರ್ಷವೂ ಹೊಸತಾಗಿ ಮೀನುಗಾರಿಕೆ ಚಟುವಟಿಕೆ ನಡೆಸುವವರಿಗೆ ತಿಳಿಯುವ ಹಾಗೂ ಮೀನಿಗಾಗಿ ಬಂದರಿಗೆ ಬರುವವರಿಗೆ ಮಾಹಿತಿಗಾಗಿ ಈ ಕ್ರಮ ಅನುಸರಿಸಲಾಗುತ್ತದೆ. ಕಳೆದ ಹಲವಾರು ವರ್ಷಗಳ ಹಿಂದೆ ಹಿರಿಯರು ಸೇರಿ ಕೈಗೊಂಡ ಒಮ್ಮತದ ನಿರ್ಧಾರದ ಪ್ರಕಾರ ಮೀನುಗಾರಿಕಾ ಬಂದರಿನಲ್ಲಿ ಎಂಟು ದಿನ ಮೀನುಗಾರಿಕಾ ರಜೆಗಳನ್ನು ಘೋಷಿಸಲಾಗಿದೆ ಎಂದರು.

ಚೌತಿ ಹಬ್ಬ, ಬಾರ್ಕೂರು ಶ್ರೀ ಕುಲ ಮಹಾಸ್ತ್ರಿ ಅಮ್ಮನವರ ವಾರ್ಷಿಕ ಜಾತ್ರೆ, ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವಾರ್ಷಿಕ ಜಾತ್ರೆ, ಮೀಲಾದುನ್ನಬಿ, ಬಕ್ರೀದ್, ಈದುಲ್ ಫಿತ್ರ್, ಕ್ರಿಸ್ಮಸ್ ಹಾಗೂ ಗುಡ್ ಫ್ರೈಡೆ ಈ ರಜೆಯನ್ನು ಎಲ್ಲರೂ ಕ್ರಮಬದ್ಧವಾಗಿ ಪಾಲಿಸುತ್ತಿದ್ದಾರೆ. ಚೌತಿ ಸಂದರ್ಭದಲ್ಲೂ ಹೊಸತಾಗಿ ಮೀನುಗಾರಿಕೆ ಚಟುವಟಿಕೆಗೆ ಬಂದವರು ಒಕ್ಕೂಟದ ನಿರ್ಣಯ ಉಲ್ಲಂಘಿಸಿ ಮೀನುಗಾರಿಕಾ ಚಟುವಟಿಕೆ ನಡೆಸಿರುವುದು ಕಂಡುಬಂದಿತ್ತು. ಹೀಗಾಗಿ ರಜೆಯ ನಿರ್ಬಂಧವನ್ನು ಕಡ್ಡಾಯವಾಗಿ ಪಾಲಿಸುವಂತೆ ಫ್ಲೆಕ್ಸ್ ಮೂಲಕ ತಿಳಿಸಲಾಗಿತ್ತು. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ವಿಚಾರದಲ್ಲಿ ಹೊರಗಿನವರು ಯಾರೂ ಸಮುದಾಯದ ಶಾಂತಿ ಕದಡುವ ಪ್ರಯತ್ನ ಮಾಡಬೇಡಿ ಎಂದರು.

ಇತ್ತೀಚಿನ ಸುದ್ದಿ