ದಕ್ಷಿಣ ಕನ್ನಡದಲ್ಲಿ ಅಬ್ಬರಿಸಿದ ಮಳೆ: ಉಡುಪಿ-ದ.ಕ ಜಿಲ್ಲೆಯಲ್ಲಿ ಸೆ.30ರವರೆಗೆ ಆರೆಂಜ್ ಅಲರ್ಟ್ - Mahanayaka

ದಕ್ಷಿಣ ಕನ್ನಡದಲ್ಲಿ ಅಬ್ಬರಿಸಿದ ಮಳೆ: ಉಡುಪಿ–ದ.ಕ ಜಿಲ್ಲೆಯಲ್ಲಿ ಸೆ.30ರವರೆಗೆ ಆರೆಂಜ್ ಅಲರ್ಟ್

rain
30/09/2023


Provided by

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದೆ. ದಕ್ಷಿಣ ಕನ್ನಡದಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರಿದಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಎಡೆಬಿಡದೆ ಮಳೆ ಸುರಿಯುತ್ತಿದೆ. ಬಿರುಸಿನ ಮಳೆಗೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಂಕಿ ಅಂಶಗಳ ಪ್ರಕಾರ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸೆಪ್ಟೆಂಬರ್ 30 ಮಧ್ಯಾಹ್ನದವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ರವಿವಾರ ಮತ್ತು ಸೋಮವಾರ ಹಳದಿ ಅಲರ್ಟ್ ಘೋಷಿಸಲಾಗಿದೆ. ಗಾಳಿಯ ವೇಗ ಗಂಟೆಗೆ 55 ಕಿ.ಮೀ. ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಅರಬ್ಬಿ ಸಮುದ್ರದಲ್ಲಿ ಕಡಿಮೆ ವಾಯುಭಾರ ಕುಸಿತದಿಂದಾಗಿ ಈ ರೀತಿಯ ಮಳೆಯಾಗುತ್ತಿದ್ದು, ಇದು ಕೆಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ. ಇದರ ಜತೆಯಲ್ಲಿ ಗಾಳಿಯ ಒತ್ತಡ 40 ರಿಂದ 60 ಕಿ.ಮೀ ಸಾಗಲಿದೆ.

ತಿರುವನಂತಪುರಂನ ಭಾರತೀಯ ಹವಾಮಾನ ಇಲಾಖೆಯು ನೀಡಿದ ಹವಾಮಾನ ಮುನ್ಸೂಚನೆಯಂತೆ  ಅಕ್ಟೋಬರ್ 2ರ ವರೆಗೆ ಅರಬ್ಬಿ ಸಮುದ್ರದಲ್ಲಿ ನಿಮ್ನ ಒತ್ತಡ ಉಂಟಾಗಿದ್ದು, ಚಂಡ ಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೀನುಗಾರರು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರಿಕೆ ದೋಣಿಗಳು ಕೂಡಲೇ ದಡ ಸೇರುವಂತೆ ಎಲ್ಲಾ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ