ಉಡುಪಿಯಲ್ಲಿ ಧಮ್ಮ ಚಕ್ಕ ಪವತ್ತನ ದಿನದ ಪ್ರಯುಕ್ತ ಧಮ್ಮ ದೀಕ್ಷಾ ದಿನಾಚರಣೆ
ಉಡುಪಿ: ದಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ,ಉಡುಪಿ ಜಿಲ್ಲಾ ಘಟಕದ ವತಿಯಿಂದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ನಾಗಪುರದಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮಕ್ಕೆ ಮರಳಿದ ವಾರ್ಷಿಕ ದಿನದ ಪ್ರಯುಕ್ತ “ಧಮ್ಮ ದೀಕ್ಷಾ ದಿನಾಚರಣೆಯನ್ನು (ಧಮ್ಮ ಚಕ್ಕ ಪವತ್ತನ ದಿನ) ” ಕಾರ್ಯಕ್ರಮವನ್ನು ಅಂಬೇಡ್ಕರ್ ಭವನ ಆದಿ ಉಡುಪಿಯಲ್ಲಿ ಆಯೋಜಿಸಲಾಗಿತ್ತು.
ಸುಗತಪಾಲ ಭಂತೇಜಿ, ಜೇತವನ ಬುದ್ಧ ವಿಹಾರ, ಕೊಳ್ಳೆಗಾಲ ಇವರು ಕಾರ್ಯಕ್ರಮ ಉದ್ಘಾಟಿಸಿ ಧಮ್ಮ ಪ್ರವಚನ ನೀಡಿದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೌದ್ಧರು ಧಮ್ಮಾಚಾರಿ ಎಸ್. ಆರ್. ಲಕ್ಷ್ಮಣ್ ನೇತೃತ್ವದಲ್ಲಿ ಸಾಮೂಹಿಕ ಬುದ್ಧವಂದನೆ ನೆರವೇರಿಸಿದರು.
ಬೌದ್ಧ ಸಾಹಿತಿ ಮತ್ತು ಚಿಂತಕರಾದ ಸೋಸಲೆ ಗಂಗಾಧರ ಅವರು, ಮೌಢ್ಯ ಹಾಗೂ ಅನೈತಿಕತೆಯೇ ಸಾಮಾಜಿಕ ವ್ಯವಸ್ಥೆಯ ಆಧಾರವಾಗಿದ್ದ ಕಾಲಗಟ್ಟದಲ್ಲಿ ಭಗವಾನ್ ಬುದ್ದರು ಜನರಿಗೆ ನೈತಿಕತೆ, ವಿಚಾರಶೀಲತೆಯ ಅರಿವನ್ನು ಮೂಡಿಸಿ ತನ್ನ ಜ್ಞಾನೋದಯದ ತಿರುಳಾದ ಪಂಚಶೀಲ ಮತ್ತು ಅಷ್ಟಾಂಗ ಮಾರ್ಗವನ್ನು ಬೋದಿಸಿ ದಮ್ಮದ ಚಕ್ರ ಚಲನಶೀಲಗೊಳಿಸಿದರು. ಬೌದ್ಧ ದಮ್ಮವು ಭಾರತದಲ್ಲಿ ನಶಿಸುತ್ತಿರುವ ಸಂದರ್ಭದಲ್ಲಿ ಬಾಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ರವರು ತನ್ನ ಲಕ್ಷಾಂತರ ಅನುಯಾಯಿಗಳೊಂದಿಗೆ 14ನೇ ಅಕ್ಟೋಬರ್ 1956 ರಂದು ನಾಗಪುರದಲ್ಲಿ ದಮ್ಮ ದೀಕ್ಷೆ ಪಡೆಯುವ ಮೂಲಕ ಮತ್ತೆ ಭಗವಾನ್ ಬುದ್ಧರ ದಮ್ಮ ಚಕ್ರಕ್ಕೆ ಚಾಲನೆ ನೀಡಿದರು ಎಂದು ದಿನದ ಮಹತ್ವವನ್ನು ವಿವರಿಸಿದರು.
BSI ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ವಿಟ್ಲ ಮಾತನಾಡಿ, ಧಮ್ಮ ಚಟುವಟಿಕೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ತೊಡಗಿಕೊಳ್ಳುವ ಕಾರ್ಯರೂಪದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವಾರು ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಲವರು ಪೂಜ್ಯ ಬಂತೇಜಿಯವರಿಂದ ಪಂಚಶೀಲಾ ಹಾಗೂ ಅಷ್ಟಾoಗಮಾರ್ಗದ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ,ಉಡುಪಿಯ ಅಧ್ಯಕ್ಷ ರಾಘವೇಂದ್ರ ವಹಿಸಿದ್ದರು. ಧಮ್ಮಾಚಾರಿ ಎಸ್.ಆರ್ ಲಕ್ಮಣ, ಸಂಬುದ್ಧ ಟ್ರಸ್ಟ್ ನ ಗೋಪಾಲಕೃಷ್ಣ , BSI ಉಡುಪಿ ಉಪಾಧ್ಯಕ್ಷೆ ಕುಶಲ ಉಪಸ್ಥಿತರಿದ್ದರು. ತಿಮ್ಮಪ್ಪ ಸ್ವಾಗತಿಸಿದರು, ಅಜಯ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. BSI ಉಡುಪಿ ಪ್ರದಾನ ಕಾರ್ಯದರ್ಶಿ ರಮೇಶ್ ನಿರೂಪಿಸಿದರು.
































