ವಿವಾಹ ಭಾಗ್ಯ ಕೊಡಿ ಸಿಎಂ: ಸಿದ್ದರಾಮಯ್ಯನವರಿಗೆ ಯುವಕರ ಬೇಡಿಕೆ

ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಸ್ಥಳವಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಿನ್ನೆಯಿಂದ ದೀಪಾವಳಿ ಜಾತ್ರೆ ಆರಂಭಗೊಂಡಿದೆ.
ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ಪಾದಯಾತ್ರೆ ಮೂಲಕ ಕ್ಷೇತ್ರಕ್ಕೆ ತೆರಳುತ್ತಿದ್ದು ಅವಿವಾಹಿತ ಯುವಕರು ಮದುವೆಯಾಗಲೆಂದು ಮಾದಪ್ಪನ ಮೊರೆ ಹೋಗಿದ್ದಾರೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ದೊಡ್ಡಮೂಡು ಎಂಬ ಗ್ರಾಮದಿಂದ ಯುವಕರ ದಂಡೇ ಮದುವೆ ಭಾಗ್ಯ ಕರುಣಿಸಲೆಂದು ಪಾದಯಾತ್ರೆ ನಡೆಸುತ್ತಿದ್ದಾರೆ.
ಹನೂರಿನಲ್ಲಿ ಈ ಬಗ್ಗೆ ಮಾತನಾಡಿದ ಯುವಕರು, ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ, 11 ವರ್ಷಗಳ ಹಿಂದೆ 10-20 ಯುವಕರ ತಂಡದೊಂದಿದೆ ಆರಂಭವಾದ ನಮ್ಮ ಪಾದಯಾತ್ರೆ ಈಗ ನೂರಾರು ಸಂಖ್ಯೆ ಆಗಿದೆ. ಸಿದ್ದರಾಮಯ್ಯ ಎಲ್ಲಾ ಭಾಗ್ಯವನ್ನು ಕೊಟ್ಟಿದ್ದಾರೆ ಅದೇ ರೀತಿ ರೈತರ ಮಕ್ಕಳಿಗೆ ಹೆಣ್ಣು ಭಾಗ್ಯವನ್ನು ಕೊಡಬೇಕು ಎಂದು ಒತ್ತಾಯಿಸಿದರು.
ನಮಗೆ ದುಡ್ಡು–ಕಾಸು ಬೇಡ, ವಿವಾಹ ಭಾಗ್ಯ ಕೊಡಬೇಕೆಂದು ಆಗ್ರಹಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ ನೂರಾರು ಯುವಕರು ಮಳೆ ಬರಲಿ- ರೈತರು, ಕೂಲಿ ಕಾರ್ಮಿಕರಿಗೆ ಹೆಣ್ಣು ಸಿಗಲೆಂದು ಪ್ರಾರ್ಥಿಸಿ ಪಾದಯಾತ್ರೆ ಕೈಗೊಂಡಿದ್ದರು.