ಬೋನಿಗೆ ಬೀಳದೆ ಬಾವಿಗೆ ಬಿದ್ದ ಚಿರತೆ
21/11/2023
ತುಮಕೂರು: ಆಹಾರ ಅರಸಿ ಗ್ರಾಮಕ್ಕೆ ಬಂದ ಚಿರತೆಯು ಆಯತಪ್ಪಿ ಪಾಳು ಬಿದ್ದ ಬಾವಿಗೆ ಬಿದ್ದಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಮಾರನಗೆರೆಯಲ್ಲಿ ನಡೆದಿದೆ.
ಸುಮಾರು ಮೂರು ವರ್ಷ ವಯಸ್ಸಿನ ಗಂಡು ಚಿರತೆಯಾಗಿದ್ದು ಅನೇಕ ದಿನಗಳಿಂದ ಗ್ರಾಮದ ಸುತ್ತಮುತ್ತಲು ಮೂರು ಚಿರತೆಗಳು ಓಡಾಡುತ್ತಿದ್ದು ಗ್ರಾಮಸ್ಥರನ್ನು ಭಯಭೀತಗೊಳಿಸಿವೆ.
ಈ ಮೂರು ಚಿರತೆಗಳಲ್ಲಿ ಒಂದು ಚಿರತೆ ಇಂದು ಬಾವಿಗೆ ಬಿದ್ದಿದೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಸಮೀಪ ಬೋನು ಇರಿಸಿದ್ದರು ಕೂಡ ಚಿರತೆಗಳು ಬೋನಿನಲ್ಲಿ ಸೆರೆಯಾಗುತ್ತಿಲ್ಲ.
ಮೂರು ಚಿರತೆಗಳು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದವು. ನಿನ್ನೆ ಒಂದು ಮೇಕೆಯನ್ನು ತಿಂದಿದ್ದ ಚಿರತೆಯು ನಿನ್ನೆ ರಾತ್ರಿ ಬಳಿಕ ಬಾವಿಗೆ ಬಿದ್ದಿದೆ. ಅರಣ್ಯ ಇಲಾಖೆಯಿಂದ ಚಿರತೆ ರಕ್ಷಣೆ ಮಾಡಲಾಗಿದೆ. ಬಾವಿಗೆ ಬಿದ್ದ ಚಿರತೆಯನ್ನು ನೋಡಲು ಸಾರ್ವಜನಿಕರು ತಂಡೋಪ ತಂಡವಾಗಿ ಬರುತ್ತಿದ್ದಾರೆ.




























