ಮನೆ ಬಿಟ್ಟು ಹೋದ ಪ್ರೇಮಿಗಳು: ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಮೆರವಣಿಗೆ

ಬೆಳಗಾವಿ: ಕುಟುಂಬಸ್ಥರ ವಿರೋಧದ ನಡುವೆ ಮನೆಬಿಟ್ಟು ಪ್ರೇಮಿಗಳು ಪರಾರಿಯಾಗಿದ್ದ ಪರಿಣಾಮ ಆಕ್ರೋಶಗೊಂಡ ಯುವತಿ ಕುಟುಂಬಸ್ಥರು ಯುವಕ ಮನೆಯನ್ನು ಧ್ವಂಸಮಾಡಿ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವ ಘಟನೆ ಘಟನೆ ಬೆಳಗಾವಿ ತಾಲೂಕಿನ ಹೊಸ ವಂಟಮುರಿ ಗ್ರಾಮದಲ್ಲಿ ನಡೆದಿದೆ.
ಕೆಲ ವರ್ಷಗಳಿಂದ ಯುವಕ-ಯುವತಿಯರಾದ ದುಂಡಪ್ಪ ಹಾಗೂ ಪ್ರಿಯಾಂಕಾ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಪೋಷಕರ ವಿರೋಧ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೆ ಭಾನುವಾರ ಯುವತಿಗೆ ಬೇರೆ ಯುವಕನ ಜೊತೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಜೋಡಿಗಳು ರಾತ್ರಿ ಮನೆ ಬಿಟ್ಟು ಓಡಿ ಹೋಗಿದ್ದಾರೆ.
ಈ ಘಟನೆಯಿಂದ ಕೋಪಗೊಂಡ ಯುವತಿಯ ಕುಟುಂಬಸ್ಥರು ರಾತ್ರೋರಾತ್ರಿ ಯುವಕನ ಮನೆಯನ್ನು ಸಂಪೂರ್ಣ ಧ್ವಂಸಗೊಳಿಸಿ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಅಮಾನವೀಯವಾಗಿ ವರ್ತಿಸಿದ್ದಾರೆ.
ಮಹಿಳೆ ಮೇಲಿನ ಹಲ್ಲೆಯ ವಿಚಾರ ತಿಳಿಯುತ್ತಿದ್ದಂತೆ ಕಾಕತಿ ಪೊಲೀಸರು ತಡರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯನ್ನು ರಕ್ಷಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿದ ಪೋಲಿಸರು ಮಹಿಳೆಯರು ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಮನೆಬಿಟ್ಟು ಪರಾರಿಯಾಗಿರುವ ಪ್ರೇಮಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಹೊಸ ವಂಟಮುರಿ ಗ್ರಾಮದಲ್ಲಿ ನಾಗರಿಕ ಹಾಗೂ ಸಶಸ್ತ್ರ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರು ಭೇಟಿ ನೀಡಿದ್ದಾರೆ.