ಬೈನೇ ಮರವನ್ನು ಮನೆ ಮೇಲೆ ಉರುಳಿಸಿದ ಕಾಡಾನೆ: ರಾತ್ರಿಯಿಡಿ ಮನೆ ಮುಂದೆ ನಿಂತು ಮರ ತಿಂದ ಆನೆ

12/12/2023
ಚಿಕ್ಕಮಗಳೂರು: ಬೈನೇ ಮರವನ್ನು ಮನೆಯ ಮೇಲೆ ಉರುಳಿಸಿದ ಕಾಡಾನೆ, ಇಡೀ ರಾತ್ರಿ ಮನೆಯ ಮುಂದೆ ನಿಂತು ಬೈನೆ ಮರವನ್ನು ತಿಂದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವನಗೂಲ್ ಗ್ರಾಮದಲ್ಲಿ ನಡೆದಿದೆ.
ಕಾಡಾನೆಗಳಿಗೆ ಬೈನೇ ಮರ ಅಂದ್ರೆ ಅಚ್ಚುಮೆಚ್ಚು. ಮನೆಯ ಬಳಿಯಿದ್ದ ಬೈನೇ ಮರವನ್ನು ಉರುಳಿಸಿದ ಆನೆ, ಮನೆಯ ಬಳಿಯಲ್ಲಿ ಇಡೀ ರಾತ್ರಿ ಬೈನೇ ಮರವನ್ನು ತಿಂದಿದೆ.
ಪ್ರಶಾಂತ್ ಎಂಬುವರ ಮನೆ ಮೇಲೆ ಆನೆ ಮರವನ್ನು ಉರುಳಿಸಿದೆ. ಮರ ಬಿದ್ದ ಪರಿಣಾಮ ಮನೆಯ ಸಿಮೇಂಟ್ ಶೀಟ್ ಗಳು ಪುಡಿಪುಡಿಯಾಗಿವೆ. ಆದರೂ ಮನೆ ಮಂದಿ ಮನೆಯಿಂದ ಹೊರಬಾರದೇ ಸಮಯ ಪ್ರಜ್ಞೆ ವಹಿಸಿದ್ದರಿಂದಾಗಿ ಕಾಡಾನೆ ದಾಳಿಯಿಂದ ಅವರು ತಪ್ಪಿಸಿಕೊಂಡಿದ್ದಾರೆ.
ಮಲೆನಾಡಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಜನರು ಕಂಗೆಟ್ಟಿದ್ದಾರೆ. ಈ ಹಿಂದೆ ಕಾಡಿನ ಸಮೀಪದಲ್ಲಿ ಸಿಗುತ್ತಿದ್ದ ಆನೆಗಳು, ಇದೀಗ ಮನೆ ಬಾಗಿಲಿಗೆ ಬಂದು ನಿಲ್ಲುತ್ತಿವೆ. ಇದರಿಂದಾಗಿ ಜನರು ತೀವ್ರ ಆತಂಕಕ್ಕೊಳಗಾಗಿದ್ದಾರೆ.