ಜಾಮೀನು ಸಿಕ್ಕಿದ್ದು ಒಬ್ಬನಿಗೆ, ಪೊಲೀಸರು ಬಿಡುಗಡೆಗೊಳಿಸಿದ್ದು ಮತ್ತೋರ್ವನನ್ನು!
13/12/2023
ಹರ್ಯಾಣ: ಜಾಮೀನು ಸಿಕ್ಕಿದ್ದು ಒಬ್ಬ ಕೈದಿಗೆ ಆದ್ರೆ ಪೊಲೀಸರು ಬಿಡುಗಡೆಗೊಳಿಸಿರೋದು ಮತ್ತೋರ್ವನನ್ನು… ಈ ಘಟನೆ ನಡೆದಿರೋದು ಹರ್ಯಾಣದ ಅಂಬಾಲ ಜೈಲಿನಲ್ಲಿ. ಓರ್ವ ಕೈದಿಗೆ ಜಾಮೀನು ಸಿಕ್ಕಿದ್ದು, ಆದರೆ ದಾಖಲೆ ಪತ್ರಗಳನ್ನು ಪರಿಶೀಲಿಸದೆ ಅಧಿಕಾರಿಗಳು ಮತ್ತೋರ್ವನನ್ನು ಬಿಡುಗಡೆ ಮಾಡಿದ್ದಾರೆ.
ಡಿಸೆಂಬರ್ 12ರಂದು ಈ ಘಟನೆ ಬೆಳಕಿಗೆ ಬಂದಿದ್ದು, ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ಓರ್ವ ಕೈದಿಗೆ ಜಾಮೀನು ಮಂಜೂರಾಗಿತ್ತು. ಆದರೆ ಆತನ ಬದಲಿಗೆ ಮತ್ತೊಬ್ಬನನ್ನು ಬಿಡುಗಡೆ ಮಾಡಿದ್ದು, ಈ ವಿಚಾರವನ್ನು ಬಂಧಿಖಾನೆ ಸಚಿವ ರಂಜಿತ್ ಸಿಂಗ್ ಚೌಟಾಲ ಒಪ್ಪಿಕೊಂಡಿದ್ದಾರೆ.
ಇನ್ನು ಇದೇ ವಿಚಾರದ ಕುರಿತಂತೆ ಮಾತನಾಡಿರುವ ಗೃಹ ಸಚಿವ ಅನಿಲ್ ವಿಜ್, ಘಟನೆ ಕುರಿತು ಸಮಗ್ರ ತನಿಖೆ ನಡೆಸುವುದರ ಜೊತೆಗೆ ಕರ್ತವ್ಯ ಲೋಪಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.




























