ಸಮಾಜ ಸೇವಕ, ಜನಪ್ರಿಯ ರಂಗತರಂಗ ತಂಡದ ಯಜಮಾನ ಕೆ.ಲೀಲಾಧರ ಶೆಟ್ಟಿ ದಂಪತಿ ಸಾವಿಗೆ ಶರಣು

13/12/2023
ಕಾಪು: ಸಮಾಜ ಸೇವಕ, ಕಾಪು ರಂಗತರಂಗ ನಾಟಕ ಸಂಸ್ಥೆಯ ಸಂಸ್ಥಾಪಕ ಕೆ.ಲೀಲಾಧರ ಶೆಟ್ಟಿ(68) ಹಾಗೂ ಅವರ ಧರ್ಮ ಪತ್ನಿ ವಸುಂಧರಾ ಶೆಟ್ಟಿ(58) ಜೊತೆಯಾಗಿ ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ.
ಸಮಾಜ ಸೇವೆಗೆ ಪ್ರಸಿದ್ಧಿ ಹೊಂದಿದ್ದ ಲೀಲಾಧರ ಶೆಟ್ಟಿ ಅವರು ಸರಳ ಸಜ್ಜನ ವ್ಯಕ್ತಿಯಾಗಿದ್ದರು. ಒಂದು ಬಾರಿ ಕಾಪು ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಗೂ ಸ್ಪರ್ಧಿಸಿದ್ದರು. ಸ್ಥಳೀಯ ಮಜೂರು ಗ್ರಾಮ ಪಂಚಾಯತ್ ನಲ್ಲಿ ಒಂದು ಬಾರಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಇವರು ಸದಾ ಕ್ರಿಯಾಶೀಲವಾಗಿದ್ದರು.
ಕಾಪು ರಂಗತರಂಗ ತಂಡದ ಯಜಮಾನನಾಗಿ ಲೀಲಾಧರ ಶೆಟ್ಟಿ ಅವರು ಜನಪ್ರಿಯರಾಗಿದ್ದರು. ಆದ್ರೆ, ಯಾವುದೋ ಕಾರಣಕ್ಕೆ ಮನನೊಂದು ಒಂದೇ ಸೀರೆಯಲ್ಲಿ ದಂಪತಿ ನೇಣಿಗೆ ಶರಣಾಗಿದ್ದಾರೆ. ಇವರ ಸಾವಿಗೆ ಕಾರಣಗಳು ತಿಳಿದು ಬಂದಿಲ್ಲ, ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.