ಚಳಿಗಾಲದ ಅಧಿವೇಶನ: 14 ಸಂಸದರು ಸಂಸತ್ತಿನಿಂದ ಅಮಾನತು; ಸಂಸದ ಪ್ರತಾಪ್ ಸಿಂಹ ವಿರುದ್ಧ ಯಾಕೆ ಕ್ರಮ ಇಲ್ಲ ಎಂದು ಪ್ರಶ್ನಿಸಿದ ವಿರೋಧ ಪಕ್ಷದ ಸಂಸದರು

ನಿನ್ನೆಯ ಭದ್ರತಾ ಉಲ್ಲಂಘನೆಯ ಘಟನೆಯು ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲಕ್ಕೆ ಸಾಕ್ಷಿಯಾಗುತ್ತಿದ್ದಂತೆ, ಲೋಕಸಭಾ ಸ್ಪೀಕರ್ ಇಂದು 13 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ್ದಾರೆ. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯಾನ್ ಅವರನ್ನು ಸದನದಿಂದ ಅಮಾನತುಗೊಳಿಸಿದ್ದಾರೆ. ಇಂದು ಒಟ್ಟು 14 ಲೋಕಸಭಾ ಸಂಸದರನ್ನು ಅಮಾನತುಗೊಳಿಸಲಾಗಿದೆ.
ಆದರೆ ಸದನದ ಬಾವಿಯಲ್ಲಿ ಹಾಜರಿರದ ಓರ್ವ ಸಂಸದರ ಹೆಸರನ್ನು ತಪ್ಪಾಗಿ ಸೇರಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನಂತರ ಸ್ಪಷ್ಟಪಡಿಸಿದರು. ಹೀಗಾಗಿ ಅಶಿಸ್ತಿನ ವರ್ತನೆಗಾಗಿ ಕೇವಲ 13 ಸಂಸದರನ್ನು ಮಾತ್ರ ಅಮಾನತುಗೊಳಿಸಲಾಯಿತು ಎನ್ನಲಾಗಿದೆ.
ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ, ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಬೆನ್ನಿ ಬೆಹನನ್, ವಿ.ಕೆ.ಶ್ರೀಕಂಠನ್, ಮೊಹಮ್ಮದ್ ಜಾವೇದ್, ಪಿ.ಆರ್.ನಟರಾಜನ್, ಕೆ.ಸುಬ್ರಮಣ್ಯಂ, ಎಸ್.ವೆಂಕಟೇಶನ್ ಮತ್ತು ಮಾಣಿಕಂ ಠಾಗೋರ್ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ‘ಅಶಿಸ್ತಿನ ನಡವಳಿಕೆ’ಗಾಗಿ ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು ಕಾರಣ ನೀಡಲಾಗಿದೆ.
ತಮ್ಮ ಅಮಾನತಿನ ಬಗ್ಗೆ ಪ್ರತಿಕ್ರಿಯಿಸಿದ ಕನಿಮೋಳಿ ಕರುಣಾನಿಧಿ, “ಸಂಸದರೊಬ್ಬರು ಈ (ಸಂಸತ್ತಿನ ಭದ್ರತಾ ಉಲ್ಲಂಘನೆಯ ಆರೋಪಿ) ಜನರಿಗೆ ಬರಲು ಪಾಸ್ ಗಳನ್ನು ನೀಡಿದ್ದಾರೆ. ಆ ಸಂಸದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ನಮ್ಮೊಂದಿಗೆ ಸಂಸತ್ತಿನ ಒಳಗೆ ಇದ್ದಾರೆ. ಈ ಕುರಿತು ನಾವು ಪ್ರತಿಭಟಿಸಿದ್ದೇವೆ. ಅಲ್ಲದೇ ಪ್ರಧಾನಿ ಮತ್ತು ಗೃಹ ಸಚಿವರು ಬಂದು ಸದನದಲ್ಲಿ ಹೇಳಿಕೆ ನೀಡಬೇಕೆಂದು ನಾವು ಆಗ್ರಹಿಸಿದಾಗ ಅವರು ಅದನ್ನು ಮಾಡಲು ಅವರು ಸಿದ್ಧರಿಲ್ಲ. ಹೀಗಾಗಿ ಈ ಧೋರಣೆಯನ್ನು ಖಂಡಿಸಿ ನಾವು ಪ್ರತಿಭಟಿಸಿದಾಗ, ಅವರು ಎಲ್ಲಾ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ್ದಾರೆ. ಮೊದಲು ಐವರನ್ನು ಅಮಾನತುಗೊಳಿಸಿದರು. ನಂತರ ಅವರು ಒಂಬತ್ತು ಜನರನ್ನು ಅಮಾನತುಗೊಳಿಸಿದರು. ಹಾಗಾದರೆ ಈ ಪ್ರಜಾಪ್ರಭುತ್ವ ಹೇಗಿದೆ..? ಎಂದು ಕಿಡಿಕಾರಿದ್ದಾರೆ.