ಶಾಕಿಂಗ್: ನನಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ: ದಯಾಮರಣಕ್ಕೆ ಅನುಮತಿ ಕೊಡಿ ಎಂದು ಸುಪ್ರೀಂಗೆ ಪತ್ರ ಬರೆದ ಮಹಿಳಾ ನ್ಯಾಯಾಧೀಶೆ..! - Mahanayaka
11:28 PM Thursday 30 - October 2025

ಶಾಕಿಂಗ್: ನನಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ: ದಯಾಮರಣಕ್ಕೆ ಅನುಮತಿ ಕೊಡಿ ಎಂದು ಸುಪ್ರೀಂಗೆ ಪತ್ರ ಬರೆದ ಮಹಿಳಾ ನ್ಯಾಯಾಧೀಶೆ..!

16/12/2023

ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಮಹಿಳಾ ಜಡ್ಜ್ ಓರ್ವರು ದಯಾಮರಣ ನೀಡುವಂತೆ ಸುಪ್ರೀಂಕೋರ್ಟ್‌ಗೆ ಪತ್ರ ಬರೆದಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಅವರಿಗೆ ಬಹಿರಂಗ ಪತ್ರ ಬರೆಯಲಾಗಿದೆ. ತಾನು ಹಿರಿಯ ನ್ಯಾಯಾಧೀಶ ಹಾಗೂ ಮತ್ತವರ ಸಹಚರರಿಂದ ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ. ದಯವಿಟ್ಟು ನನ್ನ ಜೀವನವನ್ನು ಗೌರವಯುತವಾಗಿ ಕೊನೆಗಾಣಿಸಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಈ ಪತ್ರದ ಬಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಲಹಾಬಾದ್‌ ಹೈಕೋರ್ಟ್‌ನಿಂದ ಸ್ಪಷ್ಟನೆ ಕೋರಿದ್ದಾರೆ.

‘ನಾನು ನ್ಯಾಯಾಂಗ ಸೇವೆಗೆ ಬಹಳ ಸಂತೋಷದಿಂದ ಸೇರಿದ್ದೆ. ಜನರಿಗೆ ನ್ಯಾಯ ಕೊಡಿಸುತ್ತೇನೆ ಎಂದು ನಂಬಿದ್ದೆ. ಆದರೆ ಅತಿ ಶೀಘ್ರದಲ್ಲಿ ನಾನೇ ನ್ಯಾಯಕ್ಕಾಗಿ ಭಿಕ್ಷೆ ಬೇಡುತ್ತೇನೆ ಎಂಬುದು ಗೊತ್ತಿರಲಿಲ್ಲ. ನನ್ನ ಅಲ್ಪಾವಧಿ ಸೇವೆಯಲ್ಲೇ ನ್ಯಾಯಾಲಯದಲ್ಲೇ ಕಿರುಕುಳಕ್ಕೆ ಒಳಗಾಗಿದ್ದೇನೆ. ತಡೆಯಲಾಗದಷ್ಟು ಲೈಂಗಿಕ ಕಿರುಕುಳ ಅನುಭವಿಸಿದ್ದೇನೆ. ನನ್ನನ್ನು ಕಸದ ತರ ಉಪಯೋಗಿಸಿಕೊಳ್ಳಲಾಗುತ್ತಿದೆ. ನಾನೊಂದು ಕೆಲಸಕ್ಕೆ ಬಾರದ ಕ್ರಿಮಿ ಕೀಟದ ತರ ಆಗಿದ್ದೇನೆ. ಹೀಗಿರುವಾಗ ಜನರಿಗೆ ಹೇಗೆ ನ್ಯಾಯ ಕೊಡಿಸಲಿ..? ನಾನು ಒಂದು ಜಿಲ್ಲೆಯ ನ್ಯಾಯಾಧೀಶ ಮತ್ತು ಅವರ ಸಹಚರರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ರಾತ್ರಿ ಸಮಯದಲ್ಲಿ ಅವರನ್ನು ಭೇಟಿಯಾಗುವಂತೆ ನನಗೆ ತಿಳಿಸಲಾಗಿತ್ತು. ಈ ಬಗ್ಗೆ ದೂರು ನೀಡಿದರೂ ಅಲಹಾಬಾದ್‌ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರು ಯಾವುದೇ ಕ್ರಮ ಕೈಗೊಂಡಿಲ್ಲ.

ಹೈಕೋರ್ಟ್‌ನ ಆಂತರಿಕ ದೂರು ಸಮಿತಿಗೂ ದೂರು ನೀಡಲಾಗಿತ್ತು. ಆದರೆ ಈ ವಿಚಾರಣೆ ಸಂಪೂರ್ಣ ಮೋಸದಿಂದ ಕೂಡಿದೆ. ಹೀಗಾಗಿ ನನಗೆ ದಯಾಮರಣಕ್ಕೆ ಅನುಮತಿ ಕೊಡಿ’ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಇದೀಗ ಈ ವಿಚಾರ ಬಹಳ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚಿನ ಸುದ್ದಿ