ಬ್ರಿಜ್ ಭೂಷಣ್ ಸಹಾಯಕ ಸಂಜಯ್ ಸಿಂಗ್ ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಆಯ್ಕೆ ಹಿನ್ನೆಲೆ: ‘ನಾನು ಕುಸ್ತಿಯನ್ನು ತೊರೆದಿದ್ದೇನೆ’ ಎಂದು ಕಣ್ಣೀರಿಟ್ಟ ಸಾಕ್ಷಿ ಮಲಿಕ್

ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಷ್ಠಾವಂತ ಸಂಜಯ್ ಸಿಂಗ್ ಅವರು ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಆಯ್ಕೆಯಾದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು ಕುಸ್ತಿಯನ್ನು ತೊರೆಯುವುದಾಗಿ ಹೇಳಿದರು. ನವದೆಹಲಿಯಲ್ಲಿ ಗುರುವಾರ ನಡೆದ ಬಹುನಿರೀಕ್ಷಿತ ಡಬ್ಲ್ಯುಎಫ್ಐ ಚುನಾವಣೆಯಲ್ಲಿ ಸಂಜಯ್ ಸಿಂಗ್ ಅವರು ಮಾಜಿ ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಅನಿತಾ ಶಿಯೋರನ್ ಅವರನ್ನು 40-7 ಮತಗಳಿಂದ ಸೋಲಿಸಿದರು.
ರಾಜಧಾನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾಕ್ಷಿ ಮಲಿಕ್, ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಕುಟುಂಬ ಮತ್ತು ಆಪ್ತ ಸಹಾಯಕರಿಗೆ ಅವಕಾಶ ನೀಡದಿರುವ ಬಗ್ಗೆ ಕ್ರೀಡಾ ಸಚಿವಾಲಯವು ಕುಸ್ತಿಪಟುಗಳಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದ್ದಾರೆ. ಉತ್ತರ ಪ್ರದೇಶ ಕುಸ್ತಿ ಒಕ್ಕೂಟದ ಉಪಾಧ್ಯಕ್ಷರಾಗಿದ್ದ ಸಂಜಯ್ ಸಿಂಗ್ ಅವರು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಬಲಗೈ ಬಂಟರಾಗಿದ್ದರು ಎಂದು ಸಾಕ್ಷಿ ಒತ್ತಿ ಹೇಳಿದರು.
ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತ ಬಜರಂಗ್ ಪೂನಿಯಾ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಾಕ್ಷಿ ಮಲಿಕ್ ಕಣ್ಣೀರು ನಿಯಂತ್ರಿಸಲು ಸಾಧ್ಯವಾಗದೇ ಕಣ್ಣೀರಿಟ್ಟರು. ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಭಾರತೀಯ ಕುಸ್ತಿ ಒಕ್ಕೂಟದ ಹಿಂದಿನ ಆಡಳಿತದ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಬೆಂಬಲ ನೀಡಿದ ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಇದೇ ವೇಳೆ ಸಾಕ್ಷಿ ಧನ್ಯವಾದ ಅರ್ಪಿಸಿದರು.
ನಾವು 40 ದಿನಗಳ ಕಾಲ ರಸ್ತೆಗಳಲ್ಲಿ ಮಲಗಿದ್ದೆವು. ದೇಶದ ಹಲವಾರು ಭಾಗಗಳಿಂದ ಸಾಕಷ್ಟು ಜನರು ನಮ್ಮನ್ನು ಬೆಂಬಲಿಸಲು ಬಂದಿದ್ದರು. ಬ್ರಿಜ್ ಭೂಷಣ್ ಸಿಂಗ್ ಅವರ ವ್ಯವಹಾರ ಪಾಲುದಾರ ಮತ್ತು ಆಪ್ತ ಸಹಾಯಕ ಡಬ್ಲ್ಯುಎಫ್ಐ ಅಧ್ಯಕ್ಷರಾಗಿ ಆಯ್ಕೆಯಾದರೆ, ನಾನು ಕುಸ್ತಿಯನ್ನು ತ್ಯಜಿಸುತ್ತೇನೆ” ಎಂದು ಸ್ಟಾರ್ ಕುಸ್ತಿಪಟು ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಘೋಷಣೆ ಮಾಡಿದರು.