ವಾಯು ಗುಣಮಟ್ಟ ಕಳಪೆ: ದಿಲ್ಲಿಯಲ್ಲಿ ಬಿಎಸ್ 3 ಪೆಟ್ರೋಲ್, ಬಿಎಸ್ 4 ಡೀಸೆಲ್ 4 ಚಕ್ರದ ವಾಹನಗಳಿಗೆ ನಿಷೇಧ

ದೆಹಲಿ-ಎನ್ಸಿಆರ್ ನಲ್ಲಿ ಅನಿವಾರ್ಯವಲ್ಲದ ನಿರ್ಮಾಣ ಕಾರ್ಯಗಳನ್ನು ಮತ್ತು ಬಿಎಸ್ -3 ಪೆಟ್ರೋಲ್ ಮತ್ತು ಬಿಎಸ್ -4 ಡೀಸೆಲ್ ನಾಲ್ಕು ಚಕ್ರದ ವಾಹನಗಳ ಸಂಚಾರವನ್ನು ನಿಷೇಧಿಸಲು ಕೇಂದ್ರ ಸರ್ಕಾರ ಆದೇಶಿಸಿದೆ. ಕಡಿಮೆ ಗಾಳಿ, ಮಂಜು ಮತ್ತು ಮಬ್ಬು ಸೇರಿದಂತೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ದೆಹಲಿಯ ದೈನಂದಿನ ಸರಾಸರಿ ವಾಯು ಗುಣಮಟ್ಟದ ಹಿನ್ನಡೆಗೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಲಾಗಿದೆ.
ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಗ್ರ್ಯಾಪ್) ನ ಹಂತ -3 ರ ಅಡಿಯಲ್ಲಿ ನಿರ್ಬಂಧಗಳನ್ನು ಮತ್ತೆ ಜಾರಿಗೊಳಿಸಿದ ಸಿಎಕ್ಯೂಎಂ, ದೆಹಲಿ-ಎನ್ಸಿಆರ್ ನಲ್ಲಿ ಅನಿವಾರ್ಯವಲ್ಲದ ನಿರ್ಮಾಣ ಕಾರ್ಯಗಳು, ಕಲ್ಲು ಪುಡಿ ಮಾಡುವುದು ಮತ್ತು ಗಣಿಗಾರಿಕೆಯನ್ನು ನಿಷೇಧಿಸಲು ಆದೇಶಿಸಿದೆ.
ರಾಷ್ಟ್ರೀಯ ಭದ್ರತೆ ಅಥವಾ ರಕ್ಷಣೆಗೆ ಸಂಬಂಧಿಸಿದ ನಿರ್ಮಾಣ ಕಾರ್ಯಗಳು, ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಗಳು, ಆರೋಗ್ಯ, ರೈಲ್ವೆ, ಮೆಟ್ರೋ ರೈಲು, ವಿಮಾನ ನಿಲ್ದಾಣಗಳು, ಅಂತರರಾಜ್ಯ ಬಸ್ ಟರ್ಮಿನಲ್‌ಗಳು, ಹೆದ್ದಾರಿಗಳು, ರಸ್ತೆಗಳು, ಫ್ಲೈಓವರರ್ ಗಳು, ಮೇಲ್ಸೇತುವೆಗಳು, ವಿದ್ಯುತ್ ಪ್ರಸರಣ, ಪೈಪ್ ಲೈನ್‌ಗಳು, ನೈರ್ಮಲ್ಯ ಮತ್ತು ನೀರು ಸರಬರಾಜುಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ.
ಹಂತ -3 ರ ಅಡಿಯಲ್ಲಿ ದೆಹಲಿ, ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಮತ್ತು ಗೌತಮ್ ಬುದ್ಧ ನಗರದಲ್ಲಿ ಬಿಎಸ್ -3 ಪೆಟ್ರೋಲ್ ಮತ್ತು ಬಿಎಸ್ -4 ಡೀಸೆಲ್ ನಾಲ್ಕು ಚಕ್ರದ ವಾಹನಗಳ ಕಾರ್ಯಾಚರಣೆಗೆ ನಿರ್ಬಂಧಗಳನ್ನು ವಿಧಿಸಲಾಗಿದೆ.
ಗ್ರ್ಯಾಪ್ ಎಂಬುದು ಚಳಿಗಾಲದ ಅವಧಿಯಲ್ಲಿ ಈ ಪ್ರದೇಶದಲ್ಲಿ ಜಾರಿಗೆ ತರಲಾದ ಕೇಂದ್ರದ ವಾಯುಮಾಲಿನ್ಯ ನಿಯಂತ್ರಣ ಯೋಜನೆಯಾಗಿದೆ.