6 ವರ್ಷಗಳಿಂದ ಕೋಮಾದಲ್ಲಿದ್ದ ಯುವಕ ಸಾವು: ವೈದ್ಯರ ನಿರ್ಲಕ್ಷ್ಯದಿಂದ ಕೋಮಾಕ್ಕೆ ಜಾರಿದ್ದ ಯುವಕ - Mahanayaka
6:09 PM Wednesday 20 - August 2025

6 ವರ್ಷಗಳಿಂದ ಕೋಮಾದಲ್ಲಿದ್ದ ಯುವಕ ಸಾವು: ವೈದ್ಯರ ನಿರ್ಲಕ್ಷ್ಯದಿಂದ ಕೋಮಾಕ್ಕೆ ಜಾರಿದ್ದ ಯುವಕ

vighnesh
12/01/2024


Provided by

ಬೆಂಗಳೂರು:  ಖಾಸಗಿ ಆಸ್ಪತ್ರೆಯ ವೈದ್ಯರ ಯಡವಟ್ಟಿನಿಂದ 6 ವರ್ಷಗಳಿಂದ ಕೋಮಾದಲ್ಲಿದ್ದ  ಯುವಕ ಜನವರಿ 3ರಂದು ಕೊನೆಯುಸಿರೆಳೆದಿದ್ದಾನೆ.

2017ರ ಎಪ್ರಿಲ್‌ ನಲ್ಲಿ 20 ವರ್ಷದ ವಿಘ್ನೇಶ್‌ ಸುಬ್ರಹ್ಮಣ್ಯ ನಗರದಲ್ಲಿರುವ ಮಹಾರಾಜ ಅಗ್ರಸೇನಾ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರಿಗೆ ಹರ್ನಿಯಾ ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದು ವೈದ್ಯರು ಹೇಳಿದ್ದರು. ಅಂತೆಯೇ ಶಸ್ತ್ರ ಚಿಕಿತ್ಸೆ ವೇಳೆ ವೈದ್ಯರು ನಿರ್ಲಕ್ಷ್ಯವಹಿಸಿ 3 ಬಾರಿ ಅನಸ್ತೇಷಿಯಾ ಕೊಟ್ಟಿದ್ದರು. ಹೈಡೋಸ್‌ ಅನಸ್ತೇಷಿಯಾದ ಪರಿಣಾಮ ವಿಘ್ನೇಶ್‌ ಪ್ರಜ್ಞೆ ಕಳೆದುಕೊಂಡಿದ್ದು, ಕೋಮಾಕ್ಕೆ ಜಾರಿದ್ದರು.

ಈ ಘಟನೆ ಬಗ್ಗೆ ಅಂದೇ ಕುಟುಂಬಸ್ಥರು ಬನಶಂಕರಿ ಠಾಣೆಗೆ ದೂರು ನೀಡಿದ್ದರು. ವಿಘ್ನೇಶ್‌ ನನ್ನು ಗುಣಪಡಿಸಲು ಆತನ ಪೋಷಕರು 19 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. 6 ವರ್ಷಗಳಿಂದ ನಿರಂತರವಾಗಿ ವಿಘ್ನೇಶ್‌ ಕೋಮಾದಲ್ಲಿದ್ದರು. ಇತ್ತ ಪೊಲೀಸ್‌ ದೂರು ದಾಖಲಿಸಿದ ಬಳಿಕ ವೈದ್ಯರು ಚಿಕಿತ್ಸಾ ವೆಚ್ಚ ಭರಿಸುವುದಾಗಿ ಹೇಳಿದ್ದು, ಕೇವಲ 5 ಲಕ್ಷ ರೂಪಾಯಿ ನೀಡಿ ಕೈತೊಳೆದುಕೊಂಡಿದ್ದಾರೆ.

ಕುಟುಂಬಸ್ಥರ ಕಷ್ಟ ನೋಡಲು ಸಾಧ್ಯವಾಗದೆಯೋ ಏನೋ ಜನವರಿ 3ರಂದು ಕೋಮಾದಲ್ಲಿದ್ದ ವಿಘ್ನೇಶ್‌ ಶಾಶ್ವತವಾಗಿ ಕಣ್ಮುಚ್ಚಿದ್ದಾನೆ.

ಚಿಕಿತ್ಸಾ ವೆಚ್ಚ ಭರಿಸುತ್ತೇವೆ ಎಂದು ಹೇಳಿದ್ದ ಆಸ್ಪತ್ರೆ  ಆಡಳಿತ ಮಂಡಳಿ ಇದೀಗ ಚಿಕಿತ್ಸಾ ವೆಚ್ಚವೂ ನೀಡದೇ ವಿಘ್ನೇಶ್‌ ಕುಟುಂಬಸ್ಥರಿಗೆ ಬೆದರಿಕೆ ಹಾಕಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದೀಗ ಮತ್ತೆ ಆಸ್ಪತ್ರೆ ವಿರುದ್ಧ ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇತ್ತೀಚಿನ ಸುದ್ದಿ