ಮಗುವಿಗೆ ಜನ್ಮ ನೀಡಿದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ: ಪೋಕ್ಸೋ ಕಾಯ್ದೆಯಡಿ ದೊಡ್ಡಪ್ಪನ ಮಗ ಅರೆಸ್ಟ್

ಕಲಬುರಗಿ: ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಸಹೋದರ(ದೊಡ್ಡಪ್ಪನ ಮಗ)ನನ್ನು ಪೊಲೀಸರು ಪೋಕ್ಸೋ ಕಾಯ್ದೆಯಡಿಯಲ್ಲಿ ಬಂಧಿಸಿದ್ದಾರೆ.
ನೊಂದ ಬಾಲಕಿ ಸರ್ಕಾರಿ ವಸತಿ ಶಾಲೆಯಲ್ಲಿ ಓದುತ್ತಿದ್ದಳು. ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಹೀಗಾಗಿ ಹಾಸ್ಟೆಲ್ ಸಿಬ್ಬಂದಿ ಬಾಲಕಿಯನ್ನು ಆಕೆಯ ಪೋಷಕರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
ಬಾಲಕಿಗೆ ಹೊಟ್ಟೆ ನೋವು ಜೋರಾದಾಗ ಪೋಷಕರು ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಇನ್ನೂ ಬಾಲಕಿಯ ದೊಡ್ಡಪ್ಪನ ಮಗನೇ ಬಾಲಕಿ ಗರ್ಭ ಧರಿಸಲು ಕಾರಣ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ. ಆಸ್ಪತ್ರೆ ಸಿಬ್ಬಂದಿಯ ಮಾಹಿತಿ ಮೇರೆಗೆ ಜಿಲ್ಲೆಯ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮಕೈಗೊಳ್ಳಲಾಗಿದೆ.
ಬಾಲಕಿ ಗರ್ಭಿಣಿಯಾಗಿದ್ದರೂ, ಹಾಸ್ಟೆಲ್ ನಲ್ಲಿದ್ದವರು ಇದನ್ನು ಗಮನಿಸದೇ ನಿರ್ಲಕ್ಷ್ಯವಹಿಸಿರುವ ಆರೋಪದಲ್ಲಿ ಶಾಲೆಯ ಪ್ರಾಚಾರ್ಯ ಹಾಗೂ ವಸತಿ ನಿಲಯದ ಪಾಲಕ ಸೇರಿದಂತೆ ಇಬ್ಬರನ್ನು ಅಮಾನತು ಮಾಡಲಾಗಿದೆ.