ದೋಣಿ ಮಗುಚಿ ಓರ್ವ ಮಹಿಳೆ ಸಾವು, ಐವರು ಮಹಿಳೆಯರು ನೀರುಪಾಲು
23/01/2024
ಮುಂಬೈ: ಏಳು ಮಹಿಳೆಯರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, ಐದು ಮಹಿಳೆಯರು ನೀರುಪಾಲಾಗಿರುವ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಡೆದಿದೆ.
ನೀರಲ್ಲಿ ಮುಳುಗುತ್ತಿದ್ದ ಓರ್ವ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಉಳಿದಂತೆ ದೋಣಿ ನಿರ್ವಾಹಕರು ಈಜಿ ದಡ ಸೇರಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.
ಚಮೋರ್ಶಿಯ ಘನಪುರ್ ಘಾಟ್ ಬಳಿಯ ವನಗಂಗಾ ನದಿಯಲ್ಲಿ ದೋಣಿ ಮಗುಚಿ ಬಿದ್ದಿದೆ. ಬೋಟ್ ನಲ್ಲಿ ಓರ್ವ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಉಳಿದ ಐವರು ಮಹಿಳೆಯರು ನೀರುಪಾಲಾಗಿದ್ದಾರೆ. ಚಮೋರ್ಶಿ ಪೊಲೀಸರು ಸೇರಿದಂತೆ ಸ್ಥಳೀಯ ಈಜುಗಾರರ ಸಹಾಯದಿಂದ ನೀರುಪಾಲಾಗಿರುವ ಇತರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಚಂದ್ರಾಪುರ ಜಿಲ್ಲೆಗೆ ತೆರಳುತ್ತಿದ್ದಾಗ ಬೆಳಗ್ಗೆ 11 ಗಂಟೆ ಸುಮಾರಿಗೆ ಗಣಪುರ ಗ್ರಾಮದ ಬಳಿ ಈ ಅವಘಡ ಸಂಭವಿಸಿದೆ. ಭಾರೀ ಗಾಳಿ ಬೀಸಿದ ಕಾರಣ ದೋಣಿ ನದಿಯಲ್ಲಿ ಮಗುಚಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.




























