ಶೆಟ್ಟರ್ ಬಿಜೆಪಿಯಲ್ಲಿ ಅವಮಾನ ಆಗಿದ್ದಕ್ಕೆ ಕಾಂಗ್ರೆಸ್ ಗೆ ಬಂದಿದ್ದೀನಿ ಎಂದಿದ್ರು: ಗೃಹ ಸಚಿವ ಪರಮೇಶ್ವರ್
ಬೆಂಗಳೂರು: ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಹೋಗಿದ್ದಾರೆ. ಅವರಿಗೆ ನಾವು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ವಿ. ಅವರು ಅವಮಾನ ಆಗಿದ್ದಕ್ಕಾಗಿ ಕಾಂಗ್ರೆಸ್ಗೆ ಬಂದಿದ್ದಿನಿ ಅಂದಿದ್ದರು ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಜಗದೀಶ್ ಶೆಟ್ಟರಿಗೆ ಜನಮನ್ನಣೆ ಇರಲಿಲ್ಲ ಹಾಗಾಗಿ ಅವರು ಚುನಾವಣೆ ಯಲ್ಲಿ ಸೋತರು ಎಂದು ತಿಳಿಸಿದರು.
ಒಬ್ಬ ಸಿಎಂ ಆಗಿದ್ದವರು ಸೋಲಬಾರದಿತ್ತು. ಆದರೂ ನಾವು ಅವರಿಗೆ ಪರಿಷತ್ತ್ ಸ್ಥಾನ ಕೊಟ್ಟಿದ್ವಿ. ಅವರು ವಾಪಸ್ ಆಗಿದ್ದರ ಹಿಂದೆ ಯಾವ ಬೆದರಿಕೆ ಇದೆಯೋ, ಒತ್ತಡ ಇದೆಯೋ ಗೊತ್ತಿಲ್ಲವೆಂದರು.
ಅವರಿಂದ ನಮಗೆ ಪ್ಲಸ್ ಅಥವಾ ಮೈನಸ್ ಆಗೋ ಪ್ರಶ್ನೆಯೇ ಇಲ್ಲ. ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಬೀಳುತ್ತದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನವರು ಹಗಲುಗನಸು ಕಾಣುತಿದ್ದಾರೆ ಎಂದು ಟೀಕಿಸಿದರು.
ಪಕ್ಷದ ಅಧ್ಯಕ್ಷರು ನಮಗೆ ಸುಪ್ರಿಂ. ಹಾಗಾಗಿ ಮುದ್ದಹನುಮೇಗೌಡರು ಪಕ್ಷಕ್ಕೆ ಬರೋ ದಿನಾಂಕ ಅವರೇ ಹೇಳ್ತಾರೆ. ಮುದ್ದಹನುಮೇಗೌಡರ ಟಿಕೆಟ್ ವಿಚಾರದಲ್ಲಿ ಸಚಿವ ಕೆ.ಎನ್.ರಾಜಣ್ಣ ಹೇಳಿರೋದು ಸರಿ ಇದೆ. ನಾನು ಹೇಳೋದು ಬೇರೆ ಇಲ್ಲ…ರಾಜಣ್ಣ ಬೇರೆ ಇಲ್ಲ ಎಂದರು.
ತುಮಕೂರು-ಬೆಂಗಳೂರಿಗಿಂತ ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ನಂತೆ ತುಮಕೂರು ಅಭಿವೃದ್ಧಿ ಪಡಿಸಬೇಕಾಗಿದೆ. ಇದರಿಂದ ಬೆಂಗಳೂರಿನ ಒತ್ತಡ ಕಡಿಮೆಯಾಗಲಿದೆ ಎಂದರು.
ಹಾಗಾಗಿ ಮೆಟ್ರೋ ರೈಲನ್ನು ತುಮಕೂರಿಗೆ ವಿಸ್ತರಿಸಲು ಯೋಚನೆ ಮಾಡಲಾಗಿದೆ. ಡಿಪಿಆರ್ ಮಾಡಲು ಈಗಾಗಲೇ ಸಿಎಂ, ಡಿಸಿಎಂ ಸೂಚಿಸಿದ್ದಾರೆ. ಪಿಪಿಪಿ ಮಾಡೆಲ್ ನಲ್ಲಿ ಬಂಡವಾಳ ಹೂಡಲು ತಯಾರಿದ್ದಾರೆ. ಕೇಂದ್ರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದರು.
ಸರ್ಕಾರದಲ್ಲಿ ಹಣದ ಮುಗ್ಗಟ್ಟಿದೆ, ಗ್ಯಾರಂಟಿ ಯೋಜನೆಗೆ ಹಣ ವ್ಯಯಿಸುವ ಅವಶ್ಯ ಇದೆ. ಆದರೂ ತುಮಕೂರು ಜಿಲ್ಲೆಗೆ ಹೆಚ್ಚುವರಿಯಾಗಿ ಅನುದಾನ ಕೊಡಲು ಸಿಎಂ ಬಳಿ ಮನವಿ ಮಾಡುತ್ತೇನೆ ಎಂದರು.
ಕೆ.ಎಸ್.ಆರ್ ಟಿ ಕಾಮಗಾರಿ ಅಪೂರ್ಣ ಆದರೂ ಸಿಎಂ ಚಾಲನೆ ಕೊಡ್ತಾರೆ. ಜನವರಿ 29 ರಂದು ನಡೆಯುವ ಕಾರ್ಯಕ್ರಮದಲ್ಲಿ ಚಾಲನೆ ಕೊಡಲಿದ್ದಾರೆ ಎಂದರು.
ರಾಮ ಮಂದಿರ ಅಪೂರ್ಣ ಆದರೂ, ಚಾಲನೆ ಕೊಟ್ಟಿಲ್ಲವೇ. ಅದೇರೀತಿಯಲ್ಲಿ ತುಮಕೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಕಾಮಗಾರಿ ಪೂರ್ಣ ಆಗದೇ ಇದ್ದರೂ ಸಿಎಂ ಉದ್ಘಾಟನೆ ಮಾಡಲಿದ್ದಾರೆ ಎಂದರು.




























