ಶಾಲಾ ಬಸ್-ಟ್ರ್ಯಾಕ್ಟರ್ ನಡುವೆ ಅಪಘಾತ: ನಾಲ್ವರು ವಿದ್ಯಾರ್ಥಿಗಳ ದುರ್ಮರಣ, ಎಂಟಕ್ಕೂ ಅಧಿಕ ಮಕ್ಕಳಿಗೆ ಗಾಯ

ಬಾಗಲಕೋಟೆ: ಶಾಲಾ ಬಸ್ ಹಾಗೂ ಟ್ರ್ಯಾಕ್ಟರ್ ಮಧ್ಯೆ ಅಪಘಾತ ಸಂಭವಿಸಿದ್ದು, ಓರ್ವ ವಿದ್ಯಾರ್ಥಿನಿ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳು ಮೃಪಟ್ಟಿರುವ ಘಟನೆ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ಬಳಿ ಮಧ್ಯರಾತ್ರಿ 12 ಗಂಟೆಗೆ ಸಂಭವಿಸಿದೆ.
ಎಂಟಕ್ಕೂ ಅಧಿಕ ಮಕ್ಕಳಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಗರ ಕಡಕೋಳ (17), ಶ್ವೇತಾ (13), ಗೋವಿಂದ (13), ಬಸವರಾಜ (17) ಮೃತ ದುರ್ದೈವಿಗಳು. ಮೃತ ವಿದ್ಯಾರ್ಥಿಗಳು ಕವಟಗಿ ಗ್ರಾಮದ ಮೂಲದವರು ಎಂದು ತಿಳಿದು ಬಂದಿದೆ.
ಮೃತರು ಆಲಗೂರು ಗ್ರಾಮದ ಬಳಿ ಇರುವ ಶ್ರೀ ವರ್ಧಮಾನ ಮಹಾವೀರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುಗಿಸಿಕೊಂಡು ಕವಟಗಿ ಗ್ರಾಮದ ಕಡೆ ಶಾಲಾ ಬಸ್ ನಲ್ಲಿ ಹೊರಡುವಾಗ ದುರಂತ ಸಂಭವಿಸಿದೆ.
ಮೃತರು ವರ್ಧಮಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು, ಇಬ್ಬರು ಪಿಯುಸಿ, ಮತ್ತಿಬ್ಬರು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.
ಭಾನುವಾರ ಸ್ನೇಹಿತರೊಟ್ಟಿಗೆ ಕಾರ್ಯಕ್ರಮ ಮುಗಿಸಿಕೊಂಡು ಕವಟಗಿ ಗ್ರಾಮದ ಕಡೆಗೆ ಸ್ಕೂಲ್ ಬಸ್ ಹೊರಟಿತ್ತು. ರಾತ್ರಿ 12 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸದ್ಯ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ಶಾಸಕ ಜಗದೀಶ್ ಗುಡಗುಂಟಿ ಭೇಟಿ ನೀಡಿದರು. ಈ ವೇಳೆ ಮೃತ ಮಕ್ಕಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹಾಗೇ ಮಾಜಿ ಶಾಸಕ ಆನಂದ ನ್ಯಾಮಗೌಡ ಕೂಡ ಆಸ್ಪತ್ರೆಗೆ ಭೇಟಿ ನೀಡಿದರು. ಕುಟುಂಬಸ್ಥರಿಗೆ ಪರಿಹಾರ ಕೊಡಿಸುವುದಾಗಿ ಇಬ್ಬರೂ ನಾಯಕರು ಭರವಸೆ ನೀಡಿದರು.