ತಂದೆಯ ಬ್ಯಾಗ್, ಮೊಬೈಲ್ ಕದ್ದ ಕಳ್ಳನನ್ನು ಗೂಗಲ್ ಮ್ಯಾಪ್ ಬಳಸಿ ಕಂಡು ಹಿಡಿದ ಮಗ! - Mahanayaka

ತಂದೆಯ ಬ್ಯಾಗ್, ಮೊಬೈಲ್ ಕದ್ದ ಕಳ್ಳನನ್ನು ಗೂಗಲ್ ಮ್ಯಾಪ್ ಬಳಸಿ ಕಂಡು ಹಿಡಿದ ಮಗ!

arest
05/02/2024


Provided by

ಚೆನ್ನೈ: ರೈಲಿನಲ್ಲಿ ತಂದೆಯ ಬ್ಯಾಗ್, ಮೊಬೈಲ್ ಕದ್ದು ಪರಾರಿಯಾಗಿದ್ದ ಕಳ್ಳನನ್ನು ಗೂಗಲ್ ಮ್ಯಾಪ್ ನ ಸಹಾಯದಿಂದ ಮಗ ಪತ್ತೆ ಹಚ್ಚಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ರಾಜಭಗತ್ ಎಂಬವರ ತಂದೆ ಭಾನುವಾರ ತಮಿಳುನಾಡಿನ ಕನ್ಯಾಕುಮಾರಿ ಬಳಿಯ ನಾಗರ್ ಕೋಯಿಲ್ ನಿಂದ ಕಾಚಿಗಾಡ್ ಎಕ್ಸ್ ಪ್ರೆಸ್ ರೈಲಿನಲ್ಲಿ ತಿರುಚನಾಪಳ್ಳಿಗೆ ತೆರಳುತ್ತಿದ್ದರು. ರಾತ್ರಿ 1 ಗಂಟೆಯ ಸುಮಾರಿಗೆ ಅವರು ರೈಲು ಹತ್ತಿದ್ದರು. ಬೆಳಗ್ಗಿನ ಜಾವ 3 ಗಂಟೆಯ ಸುಮಾರಿಗೆ ತಿರುನಲ್ವೇಲಿ ಜಂಕ್ಷನ್ ಗೆ ರೈಲು ತಲುಪಿದಾಗ ಕಳ್ಳನೋರ್ವ ಅವರ ಬ್ಯಾಗ್ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದನು.

ಬ್ಯಾಗ್ ಕಳವು ಆದ ವಿಚಾರ ತಿಳಿದ ತಕ್ಷಣವೇ ಅವರು ಬೇರೊಬ್ಬರ ಮೊಬೈಲ್ ಮೂಲಕ ತನ್ನ ಮಗ ರಾಜಭಗತ್ ಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಈ ವೇಳೆ ರಾಜಭಗತ್ ಅವರು ತಮ್ಮ ತಂದೆಯ ಮೊಬೈಲ್ ನ್ನು ಗೂಗಲ್ ಮ್ಯಾಪ್ ಮೂಲಕ ಟ್ರ್ಯಾಕ್ ಮಾಡಿದ್ದಾರೆ.

ಬ್ಯಾಗ್ ಮತ್ತು ಮೊಬೈಲ್ ಕದ್ದಿದ್ದ ಕಳ್ಳ ತಿರುನಲ್ವೇಲಿ ನಿಲ್ದಾಣದಲ್ಲಿ ಇಳಿದು ನಾಗರ್ ಕೋಯಿಲ್ ಗೆ ಇನ್ನೊಂದು ರೈಲಿನ ಮೂಲಕ ಪರಾರಿಯಾಗುತ್ತಿದ್ದ. ಗೂಗಲ್ ಮ್ಯಾಪ್ ಆಧಾರದಲ್ಲಿ ತಕ್ಷಣವೇ ಕಳ್ಳನ ಬೆನ್ನು ಬಿದ್ದ ರಾಜಭಗತ್ ನಾಗರ್ ಕೋಯಿಲ್ ರೈಲ್ವೇ ನಿಲ್ದಾಣಕ್ಕೆ ತೆರಳಿದ್ದು, ಅಲ್ಲಿನ ರೈಲ್ವೇ ಪೊಲೀಸರ ಸಹಾಯದಿಂದ ಹುಡುಕಾಡಿದ್ದಾರೆ. ಈ ವೇಳೆ ಜನಸಂದಣಿ ನಡುವೆ ನುಗ್ಗಿದ ಕಳ್ಳ ತಪ್ಪಿಸಿಕೊಂಡು ಬಸ್ ಹತ್ತಿ ತೆರಳಿದ್ದ.

ಆದರೂ ಬಿಡದ ರಾಜಭಗತ್, ಗೂಗಲ್ ಮ್ಯಾಪ್ ಆಧರಿಸಿ ಹುಡುಕಾಡಿದಾಗ “ಅಣ್ಣಾ ಬಸ್ ನಿಲ್ದಾಣ”ದಲ್ಲಿ ಕಳ್ಳ ಸಿಕ್ಕಿಬಿದ್ದಿದ್ದಾನೆ. ರಾಜಭಗತ್ ಅವರು ಸ್ಥಳೀಯರ ನೆರವಿನೊಂದಿಗೆ ಕಳ್ಳನನ್ನು ಹಿಡಿದು ಪರಿಶೀಲಿಸಿದಾಗ ತಂದೆಯ ಬ್ಯಾಗ್ ಹಾಗೂ ಮೊಬೈಲ್ ಮತ್ತು ಬ್ಯಾಗ್ ನಲ್ಲಿದ್ದ 1 ಸಾವಿರ ರೂಪಾಯಿ ಸಿಕ್ಕಿದೆ.

ಇನ್ನೂ ತಂದೆಯ ಮೊಬೈಲ್ ಮತ್ತು ಬ್ಯಾಗ್ ಕಳ್ಳನಿಂದ ವಾಪಸ್ ಪಡೆಯಲು ಸಹಾಯವಾದ ಗೂಗಲ್ ಮ್ಯಾಪ್ ಗೆ ರಾಜ್ ಭಗತ್ ಧನ್ಯವಾದಗಳನ್ನು ತಿಳಿಸಿದ್ದಾರೆ.

ರಾಜ್ ಭಗತ್ ಅವರ ತಂದೆಯ ಮೊಬೈಲ್ ನಲ್ಲಿ ಪವರ್ ಬಟನ್ ಆಫ್ ಮಾಡಿ ಸ್ವಿಚ್ ಆಫ್ ಮಾಡುವ ಆಯ್ಕೆಯನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಹೀಗಾಗಿ ಕಳ್ಳನಿಗೆ ಮೊಬೈಲ್ ಸ್ವಚ್ಚ್ ಆಫ್ ಮಾಡಲು ಸಾಧ್ಯವಾಗಿರಲಿಲ್ಲ.

ಇತ್ತೀಚಿನ ಸುದ್ದಿ