ನಾಯಿ ಬಿಸ್ಕೆಟ್ ವಿಚಾರ: ಬಿಜೆಪಿ—ಕಾಂಗ್ರೆಸ್ ನಾಯಕರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಕಿತ್ತಾಟ!

ನವದೆಹಲಿ: ನಾಯಿ ಬಿಸ್ಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕಿತ್ತಾಟ ಆರಂಭವಾಗಿದೆ.
ಭಾರತ್ ಜೋಡೋ ನ್ಯಾಯ ಯಾತ್ರೆ ಜಾರ್ಖಂಡ್ ರಾಜ್ಯದಲ್ಲಿ ಸಾಗುತ್ತಿದ್ದ ವೇಲೆ ನಾಯಿಯೊಂದಕ್ಕೆ ಬಿಸ್ಕೆಟ್ ತಿನ್ನಿಸಲು ರಾಹುಲ್ ಗಾಂಧಿ ಪ್ರಯತ್ನಿಸಿದ್ದಾರೆ. ಆದ್ರೆ ನಾಯಿ ಬಿಸ್ಕೆಟ್ ತಿನ್ನಲಿಲ್ಲ. ಹೀಗಾಗಿ ನಾಯಿ ಬಿಸ್ಕೆಟ್ ನ್ನು ನಾಯಿಯ ಮಾಲಿಕನಿಗೆ ರಾಹುಲ್ ಗಾಂಧಿ ನೀಡಿದ್ದಾರೆ. ಈ ಸಣ್ಣ ತುಣುಕನ್ನು ಇಟ್ಟುಕೊಂಡು ಬಿಜೆಪಿ ನಾಯಕ ಅಮಿತ್ ಮಾಳವೀಯ ರಾಹುಲ್ ಗಾಂಧಿ ಅವರ ಕಾಲೆಳೆದಿದ್ದಾರೆ.
ರಾಹುಲ್ ಗಾಂಧಿ ನಾಯಿ ಬಿಸ್ಕೆಟ್ ನ್ನು ಕಾಂಗ್ರೆಸ್ ಕಾರ್ಯಕರ್ತನಿಗೆ ಕೊಟ್ಟಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರನ್ನು ನಾಯಿ ಎಂದುಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಸಹಜವಾಗಿಯೇ ಅವನತಿಯತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರು ವಿಡಿಯೋ ತಿರುಚಿ ನಡೆಸುತ್ತಿರುವ ಅಪಪ್ರಚಾರದ ಬಗ್ಗೆ ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ನಾನು ಬಿಸ್ಕೇಟ್ ಕೊಡಲು ಹೋದಾಗ ನಾಯಿ ಗಾಬರಿಯಲ್ಲಿತ್ತು. ನಡುಗುತ್ತಿತ್ತು. ಹೀಗಾಗಿ ಅದು ಬಿಸ್ಕೇಟ್ ತಿನ್ನಲಿಲ್ಲ. ನಾಯಿ ಭಯಗೊಂಡಿದೆ ಎಂದು ನನಗೆ ಅರಿವಾಯ್ತು. ಹೀಗಾಗಿ ನಾನು ನಾಯಿಯ ಮಾಲೀಕರಿಗೆ ಬಿಸ್ಕೇಟ್ ಕೊಟ್ಟೆ. ನಿಮ್ಮ ಕೈನಲ್ಲಿ ತಿನ್ನಿಸಿ, ತಿನ್ನುತ್ತದೆ ಎಂದು ಹೇಳಿದೆ. ನಂತರ ನಾಯಿ ಮಾಲೀಕರು ಬಿಸ್ಕೇಟ್ ಕೊಟ್ಟಾಗ ನಾಯಿ ತಿಂದಿತು. ಇದರಲ್ಲಿ ಚರ್ಚೆ ಮಾಡುವಂಥದ್ದು ಏನಿದೆ? ಎಂದು ಪ್ರಶ್ನಿಸಿದ್ದಾರೆ.