ಸೀಟು ಹಂಚಿಕೆ ಅಂತಿಮಗೊಳ್ಳುವವರೆಗೆ ಭಾರತ ಜೋಡೊ ನ್ಯಾಯ ಯಾತ್ರೆಯಲ್ಲಿ ಭಾಗಿಯಾಗಲ್ಲ: ಅಖಿಲೇಶ್ ಯಾದವ್

19/02/2024
ನವದೆಹಲಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಸೂತ್ರ ಅಂತಿಮಗೊಳ್ಳುವವರೆಗೆ ಭಾರತ ಜೋಡೊ ನ್ಯಾಯ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸಮಾಜವಾದಿ ಪಕ್ಷ (SP) ಮುಖ್ಯಸ್ಥ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಭಾರತ ಜೋಡೊ ನ್ಯಾಯ ಯಾತ್ರೆಯು ಸೋಮವಾರ ಅಮೇಥಿ ಮೂಲಕ ಸಾಗುತ್ತಿದ್ದು, ನಾಳೆ ರಾಯ್ ಬರೇಲಿಗೆ ಪ್ರವೇಶಿಸಲಿದೆ. ಯಾತ್ರೆಯಲ್ಲಿ ಸಮಾಜವಾದಿ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ ಎನ್ನಲಾಗಿತ್ತು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 11 ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ಎಸ್ ಪಿ ನಾಯಕರು ಹೇಳಿದ್ದಾರೆ. ಆದರೆ, ಉತ್ತರ ಪ್ರದೇಶದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ರಾಯ್ ಸೇರಿದಂತೆ ಇತರೆ ನಾಯಕರು ಇನ್ನು ಹೆಚ್ಚು ಸ್ಥಾನಗಳನ್ನು ಬಿಟ್ಟುಕೊಡುವಂತೆ ಬೇಡಿಕೆಯಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಇಂಡಿಯಾ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ಪಕ್ಷಗಳಾಗಿವೆ.