ದೇವರ ಪ್ರಸಾದ ಸೇವಿಸಿ ವಾಂತಿ, ಭೇದಿಯಿಂದ ಭಕ್ತರು ಅಸ್ವಸ್ಥ: ಆಸ್ಪತ್ರೆಯಲ್ಲಿ ಬೆಡ್ ಇಲ್ಲದೇ ಪರದಾಟ!
ಮಹಾರಾಷ್ಟ್ರ: ಧಾರ್ಮಿಕ ಕಾರ್ಯಕ್ರಮದ ವೇಳೆ ಭಕ್ತರಿಗೆ ನೀಡಿದ ‘ಪ್ರಸಾದ’ ಸೇವಿಸಿ ನಂತರ 300 ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಮಹಾರಾಷ್ಟ್ರದ ಬುಲ್ಧಾನಾದಲ್ಲಿ ನಡೆದಿದೆ.
ರಾತ್ರಿ 10 ಗಂಟೆಗೆ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದ್ದರು. ಪ್ರಸಾದ ಸೇವಿಸಿದ ಬಳಿಕ ಭಕ್ತರಿಗೆ ಹೊಟ್ಟೆ ನೋವು, ವಾಂತಿ, ಭೇದಿ ಕಾಣಿಸಿಕೊಂಡಿದ್ದು, ಅಸ್ವಸ್ಥರಾಗಿದ್ದಾರೆ.
ಕೂಡಲೇ ಭಕ್ತರನ್ನು ಬೀಬಿ ಗ್ರಾಮದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಏಕಏಕಿ ನಡೆದ ಘಟನೆಯಿಂದಾಗಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆಯ ಹಿನ್ನೆಲೆಯಲ್ಲಿ ರಸ್ತೆಯಲ್ಲೇ ಮರಗಳಿಗೆ ಕೊಕ್ಕೆ ಹಾಕಿ ಹಗ್ಗ ಹಾಕಿ ಸಲೈನ್ ಬಾಟಲಿಗಳನ್ನು ಅಳವಡಿಸಿ ಚಿಕಿತ್ಸೆ ಪಡೆಯಬೇಕಾಯಿತು.
ಆರೋಗ್ಯ ಸುಧಾರಿಸಿದ ಬಹುತೇಕ ಭಕ್ತರು ಬುಧವಾರ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಕಿರಣ್ ಪಾಟೀಲ್ ತಿಳಿಸಿದ್ದಾರೆ.
ಲೋನಾರ್ನ ಸೋಮಥಾನ ಗ್ರಾಮದಲ್ಲಿ ಒಂದು ವಾರದ ಧಾರ್ಮಿಕ ಕಾರ್ಯಕ್ರಮವಾದ ‘ಹರಿಣಂ ಸಪ್ತಾಹ’ ನಡೆಯಿತ್ತಿದ್ದು, ಕೊನೆಯ ದಿನದಂದು ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಬುಲ್ಧಾನ ಜಿಲ್ಲಾಧಿಕಾರಿ ಕಿರಣ್ ಪಾಟೀಲ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
ಇನ್ನು ಭಕ್ತರು ಸೇವಿಸಿದ ಪ್ರಸಾದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಮತ್ತು ವಿಚಾರಣೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.




























