“ಮಕ್ಕಳ ಕಳ್ಳಿ” ಎಂದು ಆರೋಪಿಸಿ ತೃತೀಯಲಿಂಗಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ!
ಚೆನ್ನೈ: ಮಕ್ಕಳನ್ನು ಅಪಹರಣ ಮಾಡುತ್ತಿದ್ದಾರೆಂದು ಶಂಕಿಸಿ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ತೃತೀಯಲಿಂಗಿಯೊಬ್ಬರನ್ನು ಅರೆಬೆತ್ತಲೆಗೊಳಿಸಿ ಲೈಟ್ ಕಂಬಕ್ಕೆ ಕಟ್ಟಿ ಹಾಕಿದ ಜನರ ಗುಂಪೊಂದು, ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
25 ವರ್ಷದ ತೃತೀಯಲಿಂಗಿ ಧನಾ ಹಲ್ಲೆಗೆ ಒಳಾಗದವರಾಗಿದ್ದಾರೆ. ಪೊಲೀಸರ ಪ್ರಕಾರ, ಪಮ್ಮಲ್ನ 25 ವರ್ಷದ ಧನಾ ತುರೈಪಾಕ್ಕಂನಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಹೋಟೆಲ್ ನಲ್ಲಿ ಊಟ ಮುಗಿಸಿ ಮನೆಗೆ ಮರಳುತ್ತಿದ ವೇಳೆ ಪಲ್ಲವರಂ ಬಳಿ ಕೆಲವರು ಬಂದು ಹೀನಾಯವಾಗಿ ಬೈದು ನಂತರ ಲೈಟ್ ಕಂಬಕ್ಕೆ ಕಟ್ಟಿ, ಅರೆಬೆತ್ತಲೆಯಾಗಿಸಿ, ಮಕ್ಕಳ ಕಳ್ಳಿ ಎಂದು ಆರೋಪಿಸಿ ಕಿರುಕುಳ ನೀಡಿದ್ದಾರೆ.
ಧನಾ ಅಳುತ್ತಾ ತಾನು ನಿರಪರಾಧಿ ಎಂದು ಎಷ್ಷೇ ಮನವಿ ಮಾಡಿದರೂ ಅದನ್ನು ಲೆಕ್ಕಿಸದೇ ಗುಂಪು ಹಲ್ಲೆ ಮುಂದುವರಿಸಿದೆ. ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ನಂದಕುಮಾರ್ ಮತ್ತು ಮುರುಗನ್ ಅವರನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.




























