ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ಸಾವಿಗೆ ಶರಣು: ಬಸ್ ಡ್ರೈವರ್ ಗೆ ವಿದ್ಯಾರ್ಥಿಯ ಸಂಬಂಧಿಕರಿಂದ ಅಟ್ಟಾಡಿಸಿ ಹಲ್ಲೆ!

ಹಾಸನ: ದ್ವಿತೀಯ ಪಿಯು ವಿದ್ಯಾರ್ಥಿಯೋರ್ವ ಹಾಸ್ಟೆಲ್ ನಲ್ಲಿ ಸಾವಿಗೆ ಶರಣಾಗಿದ್ದು, ಈ ವಿಚಾರದಲ್ಲಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಯ ಸಂಬಂಧಿಕರು ಪ್ರತಿಭಟನೆ ನಡೆಸಿದ ಘಟನೆ ಉದಯಗಿರಿಯಲ್ಲಿ ನಡೆದಿದೆ.
ವಿಕಾಸ್ (18) ಸಾವಿಗೆ ಶರಣಾದ ವಿದ್ಯಾರ್ಥಿಯಾಗಿದ್ದು, ಹಾಸನ ನಗರದ ಉದಯಗಿರಿ ಮಾಸ್ಟರ್ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ಈತ ಇಂದು ಕಾಲೇಜಿಗೆ ತೆರಳಿ ಬಳಿಕ ಒಬ್ಬನೇ ಹಾಸ್ಟೆಲ್ ಗೆ ಬಂದಿದ್ದಾನೆ. ಇದಾದ ಬಳಿಕ ಹಾಸ್ಟೆಲ್ ನಲ್ಲೇ ನೇಣು ಬಿಗಿದು ಸಾವಿಗೆ ಶರಣಾಗಿದ್ದಾನೆ.
ಯುವಕನ ಸಾವಿಗೆ ಕಾರಣಗಳು ತಿಳಿದು ಬಂದಿಲ್ಲ, ಘಟನೆಗೆ ಸಂಬಂಧಿಸಿದಂತೆ ಮೃತ ವಿದ್ಯಾರ್ಥಿಯ ಸಂಬಂಧಿಕರು ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಸ್ ಡ್ರೈವರ್ ಕಾಲೇಜಿನ ಪರ ಮಾತನಾಡಲು ಮುಂದಾಗಿದ್ದು, ಇದರಿಂದ ರೊಚ್ಚಿಗೆದ್ದ ಯುವಕ ಸಂಬಂಧಿಕರು ಡ್ರೈವರ್ ನನ್ನು ಅಟ್ಟಾಡಿಸಿ ಹಲ್ಲೆ ನಡೆಸಿದ ಘಟನೆ ನಡೆಯಿತು.
ತಕ್ಷಣವೇ ಪೊಲೀಸರು ಡ್ರೈವರ್ ನನ್ನು ಜೀಪಿನಲ್ಲಿ ಕೂರಿಸಿ ಕರೆದೊಯ್ಯಲು ಮುಂದಾಗಿದ್ದಾರೆ, ಆದರೆ ರೊಚ್ಚಿಗೆದ್ದಿದ್ದ ಪೋಷಕರು ಜೀಪಿನಿಂದ ಎಳೆದು ಹಾಕಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಕುಟುಂಬಸ್ಥರ ಆಕ್ರೋಶ ನಿಯಂತ್ರಿಸಲು ಪೊಲೀಸರು ಹರಸಾಹಸಪಡುವಂತಾಗಿತ್ತು.
ಏಕಾಏಕಿ ನಡೆದ ಪ್ರತಿಭಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth