ಅನಂತ್ ಕುಮಾರ್ ಹೆಗಡೆಯನ್ನು ಬಂಧಿಸಿ: ದಲಿತ ಸಂಘಟನೆಗಳ ಸಮನ್ವಯ ಸಮಿತಿ ಒತ್ತಾಯ

ಮಂಗಳೂರು: ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಮತ್ತೆ ಕಿಡಿಕಾರಿದ ಕೇಂದ್ರ ಸರಕಾರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ದ.ಕ ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಈ ಬಗ್ಗೆ ಗುರುವಾರ ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡರು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾವು ಮತ್ತೆ ಗೆದ್ದು ಬರಲಿದ್ದೇವೆ. 400 ಸೀಟುಗಳನ್ನು ಪಡೆಯುವ ಮೂಲಕ ಈ ದೇಶದ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ತನ್ನ ಕೊಳಕು ಬಾಯಿಯಲ್ಲಿ ದೇಶ ದ್ರೋಹದ ಹೇಳಿಕೆ ನೀಡಿರುವ ಕೇಂದ್ರ ಸರಕಾರದ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆಯ ದುವರ್ತನೆಯನ್ನು ಖಂಡಿಸಿರುವ ದಲಿತ ಸಂಘಟನೆಗಳ ಸಮನ್ವಯ ಸಮಿತಿಯು ಸಚಿವರ ವಿರುದ್ಧ ತಕ್ಷಣ ಕ್ರಮ ಜರುಗಿಸಿ ಬಂಧಿಸಬೇಕೆಂದು ಆಗ್ರಹಿಸಿದರು.
ನಮ್ಮ ದೇಶದ ಸಂವಿಧಾನವು ಪ್ರಜಾಪ್ರಭುತ್ವದ ಪ್ರಮುಖ ಅಡಿಗಲ್ಲಾಗಿದೆ. ನೈತಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಜವಾಬ್ದಾರಿಯಾಗಿ ಯಾವುದೇ ಅಂಗ, ಧರ್ಮ ಬೇಧವಿಲ್ಲದೆ ಸರ್ವ ಧರ್ಮದ ಜನತೆಗೆ ಧಾರ್ಮಿಕ, ಅಭಿವ್ಯಕ್ತಿ, ಶೈಕ್ಷಣಿಕ, ಸಾಂಸ್ಕೃತಿಕ ಹೀಗೆ ಹಲವಾರು ಸ್ವಾತಂತ್ರ್ಯದ ಹಕ್ಕುಗಳನ್ನು ಒದಗಿಸಿದೆ. ನಮ್ಮ ಸಂವಿಧಾನವು ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯಷ್ಟು ಎತ್ತಿ ಹಿಡಿದಿದೆ. ಭಾರತೀಯರೆಲ್ಲರೂ ಸಮಾನರೆಂಬ ಭಾತೃತ್ವದ ಭಾವವನ್ನು ನೀಡಿದೆ. ಯಾವ ಸಮಾಜ ಮಹಿಳೆಯರನ್ನು ಶೋಷಿಸುತ್ತಾ ಬಂದಿದೆ. ಅಂತಹ ಸಮಾಜದಲ್ಲಿ ಮಹಿಳೆಯರಿಗೆ ನಮ್ಮ ಸಂವಿಧಾನವು ಸಮಾನತೆಯ ಹಕ್ಕನ್ನು ಕಲ್ಪಿಸಿಕೊಟ್ಟಿದೆ. ಜಗತ್ತಿನ ಯಾವುದೇ ದೇಶವು ಹೊಂದಿರದ ಜಾತ್ಯಾತೀತ ಮೌಲ್ಯವನ್ನು ಎತ್ತಿ ಹಿಡಿದ ಸಂವಿಧಾನವು ನಮ್ಮದಾಗಿದ್ದು ಇಡೀ ವಿಶ್ವವೇ ಗೌರವಿಸಿ ಕೊಂಡಾಡುವಂತಹ ಸಂವಿಧಾನವನ್ನು ನಾವು ಪಡೆದಿದ್ದೇವೆ ಎಂದರು.
ಶೋಷಿತರನ್ನು, ಧಮನಿತರನ್ನು, ಮಹಿಳೆಯರನ್ನು ಶ್ರೇಣೀಕೃತ ವ್ಯವಸ್ಥೆಯಲ್ಲಿ ಕಟ್ಟಿ ಹಾಕಿರುವ ಎಲ್ಲಾ ಬಂಧನಗಳಿಂದ ವಿಮೋಚನೆಗೊಳಿಸಿ ಅವರಿಗೆ ಸ್ವಾಭಿಮಾನದ ಬದುಕನ್ನು ನೀಡಿ ಅವರಲ್ಲಿ ಆತ್ಮಗೌರವವನ್ನು ಹೆಚ್ಚಿಸಿದ ಕೀರ್ತಿ ನಮ್ಮ ಸಂವಿಧಾನಕ್ಕಿದೆ. ತಳ ಸಮುದಾಯದಲ್ಲಿ ಹುಟ್ಟಿ ಅಸ್ಪೃಶ್ಯತೆ, ಅಸಮಾನತೆ, ಅನ್ಯಾಯ, ದೌರ್ಜನ್ಯಗಳನ್ನು ಅನುಭವಿಸಿ ತನ್ನ ಅವಿವರತವಾದ ಪರಿಶ್ರಮದಿಂದ ಅಭ್ಯಾಸ ಮಾಡಿ ಜ್ಞಾನ ಭಾಸ್ಕರನಾಗಿ ಬಂದು ಸ್ವಾತಂತ್ರ್ಯದ ಹೊತ್ತಿಗೆ ಕೋಟ್ ಧರಿಸಿಕೊಂಡು ಈ ದೇಶಕ್ಕೆ ಸಂವಿಧಾನದ ಮೂಲಕ ಕೋಟೇಶನ್ ಕೊಟ್ಟು ಈ ದೇಶ ಮಾತ್ರವಲ್ಲದೇ ಜಗತ್ತೇ ಪೂಜಿಸುವ ಜಗತ್ತಿನ ಏಕೈಕ ವ್ಯಕ್ತಿ ವಿಶ್ವಜ್ಞಾನಿ, ಭಾರತ ರತ್ನ ಡಾ| ಬಿ.ಆರ್ ಅಂಬೇಡ್ಕರ್ ಆಗಿರುತ್ತಾರೆ. ಮನುವಾದಿಗಳು ಮನುಸ್ಮೃತಿಯ ಮೂಲಕ ಶತಮಾನಗಳಿಂದ ಇಲ್ಲಿನ ಮೂಲನಿವಾಸಿಗಳನ್ನು, ಶೂದ್ರರನ್ನು ಶೋಷಣೆ ಮಾಡುತ್ತಾ ಬಂದಿರುತ್ತಾರೆ. ಅಸ್ಪೃಶ್ಯ ಸಮುದಾಯದಿಂದ ಬಂದಿರುವ ಅಂಬೇಡ್ಕರ್‌ರವರು ಬರೆದಿರುವ ಸಂವಿಧಾನದ ಅಡಿಯಲ್ಲಿ ಈ ದೇಶವನ್ನು ಮುನ್ನಡೆಸಲು ಒಪ್ಪದ ಕೋಮುವಾದಿ ಬಿಜೆಪಿ ಸರಕಾರವು ಸಂವಿಧಾನವನ್ನು ಬದಲಾಯಿಸುವ ಕೃತ್ಯಕ್ಕೆ ಕೈ ಹಾಕಿದ್ದು ಇದೀಗ ಅನಂತ್ ಕುಮಾರ್ ಹೆಗಡೆ ಬಾಯಿಂದ ಹೇಳಿಕೆ ನೀಡಿ ತನ್ನ ಕೊಳಕು ಸಂಸ್ಕೃತಿಯನ್ನು ತೋರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹುಜನರಿಗೆ ಆತ್ಮ ಗೌರವವನ್ನು ತಂದು ಕೊಟ್ಟಿರುವ ಜಾತ್ಯಾತೀತ ಮೌಲ್ಯವನ್ನು ಎತ್ತಿ ಹಿಡಿದ ಈ ದೇಶದ ಸಮಸ್ತ ಜನತೆಯ ಪವಿತ್ರ ಗ್ರಂಥವಾಗಿರುವ ಸಂವಿಧಾನವನ್ನು ರಕ್ಷಿಸುವ ಮತ್ತು ಉಳಿಸುವ ಜವಾಬ್ದಾರಿ ನಮ್ಮ ಮೇಅದೆ ಮತ್ತು ಸಂವಿಧಾನಕ್ಕೆ ಗೌರವ ನೀಡದ ಇಂತಹ ವ್ಯಕ್ತಿಗಳನ್ನು ನಾವು ರಾಜಕೀಯವಾಗಿ ಸೋಅಸಿ ದೇಶದ ಅಖಂಡತೆ ಮತ್ತು ಸೌರ್ವಭೌಮತ್ವವನ್ನು ಎತ್ತಿ ಹಿಡಿಯಬೇಕೆಂದು ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ ಸರಕಾರವನ್ನು ಸೋಅಸುವ ಮೂಲಕ ಸಂವಿಧಾನದ ಉಳಿವಿಗೆ ದೇಶದ ಜನತೆ ಕಟಿಬದ್ಧರಾಗಬೇಕೆಂದು ಸಂಘಟನೆಯ ಪ್ರಮುಖರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ದ.ಸಂ.ಸ ಮುಖಂಡರಾದ ಎಂ. ದೇವದಾಸ್, ರಮೇಶ್ ಕೋಟ್ಯಾನ್, ಅಶೋಕ್ ಕೊಂಚಾಡಿ, ಚಂದ್ರಕುಮಾರ್, ರಮೇಶ್ ಕಾವೂರು, ಶೇಖರ್ ಚಿಲಿಂಬಿ, ರಘು ಕೆ. ಎಕ್ಕಾರ್, ನೇಮಿರಾಜ್ ಕಿಲ್ಲೂರು, ಸುಧಾಕರ್ ಬೋಳೂರು, ಗಿರೀಶ್ ಉಳ್ಳಾಲ್, ಎಸ್.ಪಿ ಆನಂದ, ನಾಗೇಶ್ ಬಲ್ಮಠ, ಸರೋಜಿನಿ ಬಂಟ್ವಾಳ, ದಿನೇಶ್ ಮೂಳೂರು, ರೋಹಿತ್ ಉಳ್ಳಾಲ್, ಪ್ರೇಮ್ ಬಲ್ಲಾಳ್ ಬಾಗ್ ಮೊದಲಾದವರು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth