ರಂಜಾನ್ ಉಪವಾಸದ ವೇಳೆ ಜ್ಯೂಸ್ ಕುಡಿದಿದ್ದಾರೆಂದು ಮುಸ್ಲಿಮ್ ಹುಡುಗಿಯರ ವಿಡಿಯೋ ಮಾಡಿ ಚಾರಿತ್ರ್ಯಹರಣ!: ಇದೆಂಥಾ ಧರ್ಮಾಂಧತೆ!

ಮಂಗಳೂರು: ಮುಸ್ಲಿಮರ ಪವಿತ್ರ ರಂಝಾನ್ ಮಾಸದಲ್ಲಿ ಶ್ರದ್ಧೆಯಿಂದ ಉಪವಾಸ ಆಚರಣೆ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಮಂಗಳೂರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಜ್ಯೂಸ್ ಕಾರ್ನರ್ ವೊಂದರಲ್ಲಿ ಮುಸ್ಲಿಮ್ ಹುಡುಗಿಯರು ಜ್ಯೂಸ್ ಕುಡಿಯುತ್ತಿರುವ ವಿಡಿಯೋವನ್ನು ಕಿಡಿಗೇಡಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಕಾರೊಂದರಲ್ಲಿ ತೆರಳುತ್ತಿದ್ದ ಇಬ್ಬರು ವ್ಯಕ್ತಿಗಳು, ಜ್ಯೂಸ್ ಸೆಂಟರ್ ಬಳಿ ಕಾರನ್ನು ಸ್ಲೋ ಮಾಡಿದ್ದು, ಮುಸ್ಲಿಮ್ ಕಾಲೇಜು ಹುಡುಗಿಯರಿಬ್ಬರು ಜ್ಯೂಸ್ ಕುಡಿಯುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದು, ವಿಡಿಯೋದಲ್ಲಿ ಹುಡುಗಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, “ನಾವು ಹೇಳ್ತೇವೆ ನಾವು ಮುಸ್ಲಿಮರು ಅಂತ, ಹಿಜಾಬ್ ಗಾಗಿ ಗಲಾಟೆ ಮಾಡ್ತಾರಂತೆ ” ಎಂದು ಅಸಭ್ಯ ಪದದಲ್ಲಿ ಮಾತನಾಡಿ ವಿಡಿಯೋ ಮಾಡಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹುಡುಗಿಯರ ವಿಡಿಯೋ ಮಾಡಿಕೊಂಡು ಅದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಎಷ್ಟು ಸರಿ? ಎನ್ನುವ ಪ್ರಶ್ನೆಗಳನ್ನು ಪ್ರಜ್ಞಾವಂತ ಮುಸ್ಲಿಮರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.
ಉಪವಾಸ ಎನ್ನುವುದು ಬಲವಂತವಲ್ಲ, ಕೆಲವು ಕಾರಣಗಳಲ್ಲಿ ಉಪವಾಸ ಆಚರಿಸದೆಯೇ ಇರಬಹುದು, ಆ ಹುಡುಗಿಯರು ಯಾವ ಕಾರಣಕ್ಕೆ ಉಪವಾಸ ಆಚರಿಸಿಲ್ಲ ಎನ್ನುವುದನ್ನೂ ತಿಳಿಯದೇ, ಈ ರೀತಿ ಯಾರದ್ದೋ ಮನೆಯ ಹೆಣ್ಣು ಮಕ್ಕಳ ವಿಡಿಯೋ ಮಾಡುವುದನ್ನು ಒಪ್ಪಲು ಸಾಧ್ಯವೇ? ಇದೆಂಥಾ ಧರ್ಮಾಂಧತೆ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth