ಮಾಟಮಂತ್ರಕ್ಕೆ ಬಲಿಯಾದ ಮೂವರು ವಿದ್ಯಾವಂತರು: ಕೇರಳದ ಮೂವರ ಮೃತದೇಹ ಅರುಣಾಚಲ ಪ್ರದೇಶದ ಹೊಟೇಲ್ ನಲ್ಲಿ ಪತ್ತೆ! - Mahanayaka

ಮಾಟಮಂತ್ರಕ್ಕೆ ಬಲಿಯಾದ ಮೂವರು ವಿದ್ಯಾವಂತರು: ಕೇರಳದ ಮೂವರ ಮೃತದೇಹ ಅರುಣಾಚಲ ಪ್ರದೇಶದ ಹೊಟೇಲ್ ನಲ್ಲಿ ಪತ್ತೆ!

death
03/04/2024


Provided by

ತಿರುವನಂತಪುರಂ: ಕೇರಳದ ದಂಪತಿ ಹಾಗೂ ಅವರ ಸ್ನೇಹಿತನ ಮೃತದೇಹ ಅರುಣಾಚಲ ಪ್ರದೇಶದ ಹೊಟೇಲ್ ವೊಂದರ ಕೊಠಡಿಯಲ್ಲಿ ಪತ್ತೆಯಾಗಿದ್ದು, ವಿದ್ಯಾವಂತರಾಗಿರುವ ಇವರು ಮಾಟ ಮಂತ್ರದ ಮೋಡಿಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ.

ನಿಗೂಢ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಮೂವರ ಮೃತದೇಹಗಳನ್ನು ಅರುಣಾಚಲ ಪ್ರದೇಶದ ಲೋವರ್ ಸುಬನ್ಸಿರಿ ಜಿಲ್ಲೆಯ ಪೊಲೀಸರು ಮಂಗಳವಾರ ಹೊಟೇಲ್ ಕೊಠಡಿಯಲ್ಲಿ ಪತ್ತೆ ಹಚ್ಚಿದ್ದು, ತಮ್ಮ ವಶಕ್ಕೆ ಪಡೆದಿದ್ದಾರೆ.

ಕೇರಳದ ತಿರುವನಂತಪುರಂ ಮೂಲದ ಆರ್ಯ ಮತ್ತು ಕೊಟ್ಟಾಯಂ ನಿವಾಸಿಗಳಾದ ನವೀನ್ ಮತ್ತು ಆತನ ಪತ್ನಿ ದೇವಿ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಕೇರಳದ ಈ ಮೂವರ ನಿಗೂಢ ಸಾವಿನಲ್ಲಿ ಮಾಟ ಮಂತ್ರದ ಕೈವಾಡಗಳಿವೆ ಎಂದು ಹೇಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣಾಚಲ ಪ್ರದೇಶಕ್ಕೆ ಪೊಲೀಸರ ತಂಡವನ್ನು ಕಳುಹಿಸುವುದಾಗಿ ಕೇರಳ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ವಿವಾಹಿತ ದಂಪತಿ ಹಾಗೂ ಸ್ನೇಹಿತ ಈ ಮೂವರ ಸಾವಿನಲ್ಲಿ ಅಸಹಜತೆ ಇತ್ತು ಎಂದು ತೋರುತ್ತಿದೆ. ಅವರ ಮೊಬೈಲ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಪರಿಶೀಲಿಸುವವರೆಗೆ ಯಾವುದನ್ನೂ ನಿರ್ಣಾಯಕವಾಗಿ ನಾವು ಹೇಳುವಂತಿಲ್ಲ ಎಂದು ತಿರುವನಂತಪುರಂ ನಗರ ಪೊಲೀಸ್ ಕಮಿಷನರ್ ಸಿ ನಾಗರಾಜು ಹೇಳಿದ್ದಾರೆ.
ಮೂವರು ಅಲ್ಲಿಗೆ ಏಕೆ ಹೋದರು ಮತ್ತು ಅವರ ಸಾವು ಹೇಗೆ ಸಂಭವಿಸಿತು ಎಂಬುದನ್ನೂ ತನಿಖೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ದಂಪತಿಯ ಕುಟುಂಬದ ಸ್ನೇಹಿತ ಸೂರ್ಯ ಕೃಷ್ಣಮೂರ್ತಿ ಸುದ್ದಿಗಾರರೊಂದಿಗೆ ಮಾತನಾಡಿ, ಇವರ ಸಾವಿನ ಹಿಂದೆ ಮಾಟಮಂತ್ರದ ಕೈವಾಡವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಧ್ಯಾಹ್ನದ ವೇಳೆ ನಮಗೆ ಸಾವಿನ ಸುದ್ದಿ ತಿಳಿಯಿತು. ಇವರು ಮಾಟಮಂತ್ರದ ಬಲೆಗೆ ಬಿದ್ದಿದ್ದಾರೆ. ಮೂವರು ಕೂಡ ವಿದ್ಯಾವಂತರಾಗಿದ್ದರೂ ಕೂಡ ಮಾಟ ಮಂತ್ರದ ಬಲೆಗೆ ಬಿದ್ದಿರುವುದು ಗಂಭೀರ ವಿಚಾರ ಎಂದು ಮೃತ ನವೀನ್ ನ ತಂದೆ ಭಾವುಕರಾಗಿದ್ದಾರೆ.

ಮಾರ್ಚ್ 28 ರಂದು ಮೂವರು ಹೋಟೆಲ್ಗೆ ಬಂದಿದ್ದರು. ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂದು ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರವೇ ನಿರ್ಣಾಯಕ ತೀರ್ಮಾನಕ್ಕೆ ಬರಬಹುದು ಎಂದು ಅರುಣಾಚಲ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ