ಇವರು ಕತ್ತೆ ಹಾಲಿನಿಂದ ಲಕ್ಷ ಲಕ್ಷ ಸಂಪಾದಿಸ್ತಾರೆ: ಕರ್ನಾಟಕ, ಕೇರಳದಲ್ಲಿ ಕತ್ತೆಯ ಹಾಲಿಗೆ ಭಾರೀ ಬೇಡಿಕೆ

ಅಹಮದಾಬಾದ್: ಕತ್ತೆ ಹಾಲಿಗೆ ತನ್ನದೇ ಆದ ಮಹತ್ವವಿದೆ. ಅದು ಈಗಿನ ಕಾಲದಲ್ಲಿ ಮಾತ್ರವಲ್ಲ. ಶತಮಾನಗಳಿಂದಲೂ ಬಳಕೆಯಲ್ಲಿದೆ. ಆದರೆ ಬಳಕೆ ಮಾಡುವವರ ಪ್ರಮಾಣ ಕಡಿಮೆ. ಏಕೆಂದರೆ ಕತ್ತೆಯ ಹಾಲು ದುಬಾರಿಯಾಗಿದೆ.
ಈಜಿಪ್ತ್, ಗ್ರೀಕ್ ಜನರು ಕತ್ತೆಯ ಹಾಲು ಬಳಕೆ ಮಾಡುತ್ತಿದ್ದರು ಎನ್ನುವುದು ಇತಿಹಾಸದಲ್ಲಿ ದಾಖಲಾಗಿದೆ. ಕತ್ತೆಯ ಹಾಲು ಸೇವನೆ ಯಕೃತ್ತಿನ ರಕ್ಷಣೆ, ಹಲವಾರು ಸಾಂಕ್ರಾಮಿಕ ರೋಗಗಳ ತಡೆಗೆ ಸಹಕಾರಿಯಾಗಿದೆ ಎನ್ನುವ ನಂಬಿಕೆಯಿದೆ. ಕತ್ತೆ ಹಾಲಿನ ಬಳಕೆಯಿಂದ ರೋಗ ನಿರೋಧಕಶಕ್ತಿ ವೃದ್ದಿಸುವ ಜತೆಗೆ ಮಧುಮೇಹ ನಿಯಂತ್ರಣವೂ ಸಾಧ್ಯವಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕತ್ತೆ ಹಾಲಿಗೆ ಭಾರೀ ಡಿಮಾಂಡ್ ಇದೆ.
ಇಲ್ಲೊಬ್ಬರು ಯುವಕ ಕತ್ತೆ ಹಾಲಿನ ಉತ್ಪಾದನೆಯ ಮೂಲಕ ಜೀವನದಲ್ಲಿ ಯಶಸ್ಸು ಕಂಡಿರುವ ಘಟನೆ ನಡೆದಿದೆ. ಇವರ ಹೆಸರು ಧೀರೇನ್ ಸೋಲಂಕಿ. ಸಣ್ಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಉದ್ಯೋಗದ ಭದ್ರತೆ ಇರಲಿಲ್ಲ. ಕೆಲಸ ಹೋದರೆ ಮುಂದೆ ಹೇಗೆ ಕುಟುಂಬ ನಿರ್ವಹಣೆ ಹೇಗೆ ಎನ್ನುವ ಚಿಂತೆ ಅವರನ್ನು ಕಾಡುತ್ತಿತ್ತು. ಹೀಗಾಗಿ ಏನಾದರೂ ಸ್ವಂತ ಉದ್ಯೋಗ ಮಾಡಬೇಕು ಎಂದು ಅವರು ಯೋಚಿಸಿದ್ದರು. ಈ ವೇಳೆ ಅವರಿಗೆ ಹೊಳೆದದ್ದು ಕತ್ತೆ ಹಾಲಿನ ವ್ಯಾಪಾರ.
ಸೋಲಂಕಿ ಕತ್ತೆಗಳಲ್ಲಿ ಹೈನುಗಾರಿಕೆ ಶುರು ಮಾಡಿ ಕೆಲವೇ ವರ್ಷದಲ್ಲಿ ಗೆದ್ದರು. ಅವರು ಕತ್ತೆ ಹಾಲು ಉತ್ಪಾದನೆ ಮಾತ್ರವಲ್ಲದೇ ಮಾರುಕಟ್ಟೆಗೂ ಹೆಚ್ಚು ಒತ್ತು ನೀಡಿದರು. ಗುಜರಾತ್ ನ ಪಠಾಣ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಇದ್ದ ತಮ್ಮ ಅಲ್ಪಸ್ಪಲ್ಪ ಭೂಮಿಯಲ್ಲಿ ಕೆಲ ವರ್ಷಗಳ ಹಿಂದೆ ಸೋಲಂಕಿ ಅವರು ಕತ್ತೆ ಹಾಲಿನ ವ್ಯಾಪಾರ ಶುರು ಮಾಡಿದರು. ಮೊದಲಿಗೆ ಅವರು ಸುಮಾರು 22 ಲಕ್ಷ ರೂ.ಗಳನ್ನು ವ್ಯಯಿಸಿ ಉದ್ಯಮ ಶುರು ಮಾಡಿದರು. 20 ಕತ್ತೆಗಳನ್ನು ಖರೀದಿಸಿದರು.
ಮೊದಲ ಐದು ತಿಂಗಳು ಕತ್ತೆ ಹಾಲು ಹೇಗೆ ಮಾರಾಟ ಮಾಡಬೇಕು ಎನ್ನುವುದನ್ನು ತಿಳಿಯದೇ ನಷ್ಟ ಅನುಭವಿಸಿದರು. ಆದರೆ ದೃತಿಗೆಡಲಿಲ್ಲ. ಕತ್ತೆ ಹಾಲಿಗೆ ಎಲ್ಲಿ ಬೇಡಿಕೆ ಎನ್ನುವುದನ್ನು ತಿಳಿದುಕೊಂಡರು. ವಿಶೇಷವಾಗಿ ಕರ್ನಾಟಕ, ಕೇರಳದ ಜನ ಕತ್ತೆ ಹಾಲನ್ನು ಬಳಸುತ್ತಾರೆ ಎನ್ನುವುದನ್ನು ಅರಿತು ಅಲ್ಲಿಗೆ ವ್ಯವಸ್ಥಿತವಾಗಿ ಹಾಲು ಕಳುಹಿಸಲು ಯೋಜಿಸಿದರು. ಅಲ್ಲದೇ ಕೆಲವು ಕಾಂತಿವರ್ಧಕ ಕಂಪೆನಿಗಳು ಕತ್ತೆ ಹಾಲು ಬಳಕೆ ಮಾಡುತ್ತವೆ ಎನ್ನುವುದನ್ನು ತಿಳಿದುಕೊಂಡರು. ಮೂರು ತಿಂಗಳಿನಲ್ಲೇ ತಮ್ಮ ಹೊಸ ಮಾರ್ಗ ಕೈ ಹಿಡಿಯಿತು. ವರ್ಷದೊಳಗೆ ಸೋಲಂಕಿ ಅವರ ಕತ್ತೆಗಳ ಹಾಲಿಗೆ ಎಲ್ಲಿಲ್ಲದ ಬೇಡಿಕೆ ಬಂದಿತು.
ಕತ್ತೆ ಹಾಲನ್ನು ಬಾಟೆಲ್ ಹಾಗೂ ಸ್ಯಾಚೆಟ್ ರೂಪದಲ್ಲಿ ಕಳುಹಿಸುವುದನ್ನು ಆರಂಭಿಸಿದರು. ಕತ್ತೆ ಹಾಲಿನ ಪೌಡರ್ ಗೂ ಬೇಡಿಕೆ ಎನ್ನುವುದನ್ನು ಅರಿತು ಅದರ ಘಟಕವನ್ನು ಆರಂಭಿಸಿದರು. ಹಾಲನ್ನು ಫ್ರೀಜರ್ ನಲ್ಲಿ ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಿಕೊಂಡರು. ಬರೀ ಕತ್ತೆ ಹಾಲಿಗೆ ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ ಗೆ 5,000 ರಿಂದ 7,000 ರೂ.ವರೆಗೂ ದರ ಇದೆ. ಅದೇ ರೀತಿ ಕತ್ತೆ ಹಾಲಿನ ಪುಡಿಯ ಬೆಲೆ ಕೆ.ಜಿ.ಗೆ ಒಂದು ಲಕ್ಷ ರೂ. ಎಂದರೆ ನೀವು ನಂಬಲೇಬೇಕು.
ಸದ್ಯ ಸೋಲಂಕಿ ಅವರ ಬಳಿಕ ಕತ್ತೆಗಳ ಸಂಖ್ಯೆ 42ಕ್ಕೆ ಏರಿದೆ. ಅವರ ಹೂಡಿಕೆ ಪ್ರಮಾಣವೂ 38 ಲಕ್ಷ ರೂ.ಗೆ ಏರಿಕೆಯಾಗಿದೆ. ಆದಾಯ ಮಾತ್ರ ನಾಲ್ಕೈದು ಪಟ್ಟು ಹೆಚ್ಚಿದೆ. ತಿಂಗಳಿಂದ 2–3 ಲಕ್ಷ ರೂ. ಆದಾಯ ಸೋಲಂಕಿ ಅವರಿಗೆ ಬರುತ್ತಿದೆ. ಇನ್ನೂ ಬೇಡಿಕೆ ಹೆಚ್ಚಿದ್ದು, ಹಂತ ಹಂತವಾಗಿ ವಿಸ್ತರಿಸುವ ಯೋಜನೆಯನ್ನು ಅವರು ಹೊಂದಿದ್ದಾರೆ. ಈವರೆಗೂ ಸರ್ಕಾರದ ಯಾವುದೇ ನೆರವು ಪಡೆಯದೇ ಸ್ವಂತ ಹಣ ಹಾಕಿ ಯಶಸ್ವಿಯಾಗಿರುವ ಸೋಲಂಕಿ ಅಗತ್ಯ ಬಿದ್ದರೆ ನೆರವು ಪಡೆಯುವ ಯೋಚನೆಯಲ್ಲಿದ್ದಾರೆ.
ಕತ್ತೆ ಹಾಲಿನ ವ್ಯಾಪಾರ ಲಾಭದಾಯಕವಾದದ್ದು. ಯಾವುದೇ ವ್ಯಾಪಾರವನ್ನು ಯುವಕರು ಆರಂಭಿಸಬೇಕಾದರೆ, ಅದನ್ನು ಹೇಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು ಎಂಬ ವಿಚಾರವನ್ನು ಮೊದಲು ಅರಿತುಕೊಳ್ಳಬೇಕು. ಆಗಲೇ ನಿಮ್ಮ ವ್ಯಾಪಾರ ವೃದ್ಧಿಯಾಗಲು ಸಾಧ್ಯ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth