ಚುನಾವಣೆ ಆರಂಭವಾಗುವುದಕ್ಕೂ ಮೊದಲೇ ಗೆದ್ದ ಬಿಜೆಪಿ ಅಭ್ಯರ್ಥಿ!

ನವದೆಹಲಿ: ಲೋಕಸಭಾ ಚುನಾವಣೆ ಆರಂಭವಾಗುವುದಕ್ಕೂ ಮೊದಲೇ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿರುವ ಅಚ್ಚರಿಯ ಘಟನೆ ಸೂರತ್ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ.
ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷದ ಮಧ್ಯೆ ಭಾರೀ ಪೈಪೋಟಿ ಇತ್ತು. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರ ಇಂದು ತಿರಸ್ಕೃತಗೊಂಡಿದೆ.
ನಿಲೇಶ್ ಕುಂಭಾನಿ ನಾಮಪತ್ರ ತಿರಸ್ಕೃತಗೊಂಡ ಬೆನ್ನಲ್ಲೇ ಕಣದಲ್ಲಿದ್ದ 7 ಪಕ್ಷೇತರ ಅಭ್ಯರ್ಥಿಗಳು ಇಂದು ತಮ್ಮ ನಾಮಪತ್ರ ವಾಪಸ್ ತೆಗೆದುಕೊಂಡಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮುಕೇಶ್ ದಲಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೂರತ್ ನ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್ ಅವರು 2024ರ ಚುನಾವಣೆಯ ಮೊದಲ ಸಂಸದರಾಗಿ ಆಯ್ಕೆಯಾಗಿದ್ದಾರೆ. ಮುಕೇಶ್ ದಲಾಲ್ ಚುನಾವಣಾಧಿಕಾರಿಯಿಂದ ಅವಿರೋಧ ಆಯ್ಕೆಯಾದ ಸರ್ಟಿಫಿಕೇಟ್ ಕೂಡ ಸ್ವೀಕಾರ ಮಾಡಿದ್ದಾರೆ.
ನಾಮಪತ್ರ ತಿರಸ್ಕೃತಗೊಂಡಿದ್ದು ಹೇಗೆ?
ಸೂರತ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಲಾಗಿತ್ತು. ಆದರೆ, ಸೂಚಕರಾಗಿ ಸಹಿ ಹಾಕಿದ್ದವರು, ಇದು ನಮ್ಮ ಸಹಿ ಅಲ್ಲ ಎಂದು ಹೇಳಿದ್ದರಿಂದಾಗಿ ನಾಮಪತ್ರ ತಿರಸ್ಕೃತಗೊಂಡಿದೆ. ಅಭ್ಯರ್ಥಿ ನಾಮಪತ್ರ ತಿರಸ್ಕಾರವಾಗಿರುವ ಘಟನೆಯನ್ನು ಕಾಂಗ್ರೆಸ್ ಖಂಡಿಸಿದ್ದು, ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಕಾಂಗ್ರೆಸ್ ನಿರ್ಧರಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth