ನಗರಸಭೆ ಉಪಾಧ್ಯಕ್ಷೆಯ ಪುತ್ರ ಸಹಿತ ನಾಲ್ವರ ಹತ್ಯೆ ಪ್ರಕರಣಕ್ಕೆ ತಿರುವು: ಮನೆ ಮಗನಿಂದಲೇ ಕೊಲೆಗೆ ಸುಪಾರಿ! - Mahanayaka
6:11 AM Thursday 11 - September 2025

ನಗರಸಭೆ ಉಪಾಧ್ಯಕ್ಷೆಯ ಪುತ್ರ ಸಹಿತ ನಾಲ್ವರ ಹತ್ಯೆ ಪ್ರಕರಣಕ್ಕೆ ತಿರುವು: ಮನೆ ಮಗನಿಂದಲೇ ಕೊಲೆಗೆ ಸುಪಾರಿ!

22/04/2024

ಗದಗ: ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಅಮಾನವೀಯವಾಗಿ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ನಡೆದಿತ್ತು. ಇದೀಗ ಈ ಘಟನೆ ಸ್ಫೋಟಕ ತಿರುವು ಪಡೆದುಕೊಂಡಿದೆ.


Provided by

ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ಕಾರ್ತಿಕ್ (27), ಕೊಪ್ಪಳದ ಭಾಗ್ಯ ನಗರ ನಿವಾಸಿ, ಹೋಟೆಲ್ ಉದ್ಯಮಿ ಪರಶುರಾಮ (55), ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾದವರಾಗಿದ್ದಾರೆ.

ಕಾರ್ತಿಕ್ ಅವರ ಮದುವೆ ತಯಾರಿ ಸಂಬಂಧ ಏಪ್ರಿಲ್ 17 ರಂದು ಸಂಬಂಧಿಕರಾದ ಪರಶುರಾಮ, ಪತ್ನಿ ಲಕ್ಷ್ಮೀ, ಪುತ್ರಿ ಆಕಾಂಕ್ಷಾ ಕೊಪ್ಪಳದಿಂದ ಗದಗ ನಗರಕ್ಕೆ ಆಗಮಿಸಿದ್ದರು. ಗುರುವಾರ ರಾತ್ರಿ ಆಕಾಂಕ್ಷಾ ಹುಟ್ಟು ಹಬ್ಬವನ್ನು ಕುಟುಂಬಸ್ಥರು ಆಚರಿಸಿದ್ದರು. ಬಳಿಕ ಪರಶುರಾಮ ಕುಟುಂಬ ಮನೆಯ ಮೊದಲನೇ ಮಹಡಿಯ ಕೋಣೆಯಲ್ಲಿ ಮಲಗಿತ್ತು.

ತಡ ರಾತ್ರಿ ಪರಶುರಾಮ ಕುಟುಂಬಸ್ಥರು ಮಲಗಿದ್ದ ಕೋಣೆಯ ಗಾಜಿನ ಕಿಟಕಿ ಒಡೆದು ದುಷ್ಕರ್ಮಿಗಳು ಒಳನುಗ್ಗಿದ್ದಾರೆ. ಬಳಿಕ ಮೂವರನ್ನೂ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಇದೇ ವೇಳೆ ಕೆಳಗಿನ ಕೋಣೆಯಲ್ಲಿದ್ದ ಕಾರ್ತಿಕ್ ಬಾಕಳೆ ಕಿರುಚಾಟ ಕೇಳಿ ಮೇಲೆ ಹೋಗಿ ನೋಡಿದ್ದು, ಈ ವೇಳೆ ಅವರನ್ನೂ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ನಂತರ ಮಾಲಿಕ ಪ್ರಕಾಶ್ ಬಾಕಳೆ ಮತ್ತು ಪತ್ನಿ, ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರು ಮಲಗಿದ್ದ ಕೋಣೆಯ ಬಾಗಿಲನ್ನು ದುಷ್ಕರ್ಮಿಗಳು ತಟ್ಟಿದ್ದಾರೆ. ಆದರೆ, ಅವರು ಬಾಗಿಲು ತೆಗೆಯದೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ಚರಂಡಿಗೆ ಎಸೆದು ಸ್ಥಳದಿಂದ ಪರಾರಿಯಾಗಿದ್ದರು.

ಮನೆ ಮಗನೇ ಕೊಲೆಗೆ ನೀಡಿದ್ದ ಸುಪಾರಿ:

ಪ್ರಕಾಶ್ ಬಾಕಳೆ ಹಿರಿಯ ಮಗ ವಿನಾಯಕ್ ಬಾಕಳೆಯೇ ಈ ಕೊಲೆಗೆ ಸುಪಾರಿ ನೀಡಿರುವುದು ತನಿಖೆ ಮೂಲಕ ತಿಳಿದು ಬಂದಿದೆ. ಬಾಕಳೆ ಕುಟುಂಬದ ನಾಲ್ವರನ್ನು ಹತ್ಯೆಗೆ ಖುದ್ದು ಹಿರಿಯ ಮಗ ವಿನಾಯಕ್ ಬಾಕಳೆ 65 ಲಕ್ಷ ರೂಪಾಯಿ ಡೀಲ್ ಮಾಡಿದ್ದನಂತೆ. ಅಲ್ಲದೇ, ಮಹಾರಾಷ್ಟ್ರ ಮೂಲದ ಫಯಾಜ್ ಆ್ಯಂಡ್ ಗ್ಯಾಂಗ್ಗೆ ಮುಂಗಡವಾಗಿ 2 ಲಕ್ಷ ರೂಪಾಯಿ ನೀಡಿದ್ದ ಎಂದು ತಿಳಿದು ಬಂದಿದೆ.

ಈ ಕೊಲೆಗೆ ಆಸ್ತಿ ಹಂಚಿಕೆ ವಿಷಯ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಕೊಲೆ ಕೇಸ್ ಬಗ್ಗೆ ತನಿಖೆ ನಡೆಸಿದ್ದ ಸಿಬ್ಬಂದಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿದೆ. ಕೊಲೆ ಪ್ರಕರಣ ಭೇದಿಸಿದ್ದಕ್ಕೆ ಡಿಜಿ, ಐಜಿಪಿ ವಿಕಾಸ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿhttps://chat.whatsapp.com/Jpfswu2K6fn62HOHSl5eth

 

ಇತ್ತೀಚಿನ ಸುದ್ದಿ