ರಾಜಕಾರಣದ ಆರಂಭದ ದಿನಗಳ ಕಸುಬನ್ನು ಡಿಕೆಶಿ ಮುಂದುವರಿಸಿದ್ದಾರೆ: ಸಿ.ಪಿ. ಯೋಗೇಶ್ವರ್ ವಾಗ್ದಾಳಿ - Mahanayaka

ರಾಜಕಾರಣದ ಆರಂಭದ ದಿನಗಳ ಕಸುಬನ್ನು ಡಿಕೆಶಿ ಮುಂದುವರಿಸಿದ್ದಾರೆ: ಸಿ.ಪಿ. ಯೋಗೇಶ್ವರ್ ವಾಗ್ದಾಳಿ

dk shivakumar
09/05/2024


Provided by

ರಾಮನಗರ:  ವಿಧಾನಸಭಾ ಚುನಾವಣೆಯಲ್ಲಿ ಜನರಿಂದ ಬೆಂಬಲ ಗಳಿಸಿ ಉಪ ಮುಖ್ಯಮಂತ್ರಿ ಹುದ್ದೆಗೇರಿದ ಡಿ.ಕೆ. ಶಿವಕುಮಾರ್ ಬದಲಾಗಿದ್ದಾರೆ, ಅವರಲ್ಲಿ ಒಳ್ಳೆಯತನ ಕಾಣಿಸುತ್ತಿದೆ ಎಂದು ನಾವೆಲ್ಲರೂ ಭಾವಿಸಿದ್ದೆವು. ಆದರೆ, ಅವರು ಬದಲಾಗಿಲ್ಲ. ನಾವೇ ಅವರ ಬಗ್ಗೆ ತಪ್ಪು ತಿಳಿದುಕೊಂಡಿದ್ದೇವೆ  ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿದರು.

ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪೆನ್‌ ಡ್ರೈವ್ ಹಂಚಿಕೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದು ಆರೋಪಿಸಿ, ನಗರದಲ್ಲಿ ಬುಧವಾರ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು  ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ರಾಜಕೀಯ ಲಾಭಕ್ಕಾಗಿ ಅವರು ಒಂದು ಕುಟುಂಬವನ್ನು ಹಣಿಯಲು ಅವರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು ಎಂಬುದಕ್ಕೆ ಪೆನ್‌ ಡ್ರೈವ್ ಹಂಚಿಕೆಯೇ ಸಾಕ್ಷಿ. ಇದರಿಂದಾಗಿ ಹಲವು ಹೆಣ್ಣು ಮಕ್ಕಳ ಮರ್ಯಾದೆಯನ್ನು ಬೀದಿಯಲ್ಲಿ ಹರಾಜು ಹಾಕಿದ್ದಾರೆ. ಹಾಗಾಗಿ, ಉಪ ಮುಖ್ಯಮಂತ್ರಿಯಾಗಿ ಮುಂದುವರಿಯುವ ಯಾವುದೇ ನೈತಿಕತೆ ಅವರಿಗಿಲ್ಲ’ ಎಂದು ಕಿಡಿಕಾರಿದರು.

ಪ್ರಕರಣವನ್ನು ಬಳಸಿಕೊಂಡು ಜೆಡಿಎಸ್‌ ಕುಟುಂಬವನ್ನು ಮುಗಿಸಲು ಶಿವಕುಮಾರ್ ಹೊರಟಿರುವುದು ಅಕ್ಷಮ್ಯ. ಪೆನ್ ಡ್ರೈವ್ ಹಂಚಿಕೆ ಹಿಂದೆ ಅವರ ಕೈವಾಡವಿರುವುದು ಜಗ್ಗಜ್ಜಾಹೀರಾಗಿದೆ. ರಾಜಕಾರಣದ ಆರಂಭದ ದಿನಗಳಲ್ಲಿ ಸಾತನೂರಿನಲ್ಲಿ ಮಾಡುತ್ತಿದ್ದ ಕಸುಬನ್ನು ಈಗಲೂ ಮುಂದುವರಿಸಿದ್ದಾರೆ. ಹಿಂದೆ ಬೆಳಗಾವಿಯ ರಮೇಶ್ ಜಾರಕಿಹೊಳಿ ಸೇರಿದಂತೆ ಇನ್ನೂ ಕೆಲ ರಾಜಕಾರಣಿಗಳ ಪ್ರಕರಣದಲ್ಲೂ ಶಿವಕುಮಾರ್ ಹೆಸರು ಕೇಳಿಬಂದಿದೆ. ಹಾಗಾಗಿ ರಾಜ್ಯ ಸರ್ಕಾರ ಎಸ್‌ ಐಟಿ ಬದಲು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಆಗ ಮಾತ್ರ ಸತ್ಯ ಹೊರಬರಲಿದೆ ಎಂದು ಯೋಗೇಶ್ವರ್ ಒತ್ತಾಯಿಸಿದರು.

ನಗರದ ಐಜೂರು ವೃತ್ತದಲ್ಲಿ ಬೆಳಿಗ್ಗೆ ಜಮಾಯಿಸಿದ ಎರಡೂ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಕೆಲ ಹೊತ್ತು ರಸ್ತೆ ತಡೆ ನಡೆಸಿದರು. ಡಿಸಿಎಂ ವಿರುದ್ಧದ ಪ್ರತಿಭಟನ ಫಲಕಗಳನ್ನು ಪ್ರದರ್ಶಿಸಿದ ಕಾರ್ಯಕರ್ತರು, ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.

ಇದೇ ವೇಳೆ ಧಿಕ್ಕಾರ ಕೂಗುತ್ತಾ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದರು. ಫಲಕಗಳು ಹಾಗೂ ಪ್ರತಿಕೃತಿಗೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ತಡೆದರು.

ಪ್ರಜ್ವಲ್ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ನೇಮಿಸಿರುವ ಎಸ್‌ ಐಟಿಯಿಂದ ಪಾರದರ್ಶಕವಾಗಿ ತನಿಖೆ ನಡೆಯುತ್ತಿಲ್ಲ. ಪ್ರಕರಣದ ಸತ್ಯಾಸತ್ಯತೆ ನಿಜವಾಗಿಯೂ ಹೊರಬರಬೇಕಾದರೆ, ಸಿಬಿಐಗೆ ವಹಿಸಬೇಕು. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು. ಆಗ ಮಾತ್ರ ಪ್ರಕರಣದ ಹಿಂದಿರುವವರಿಗೂ ಶಿಕ್ಷೆಯಾಗಿ ಸಂತ್ರಸ್ತರಿಗೆ ನ್ಯಾಯ ಸಿಗಲಿದೆ ಒಂದು ಒತ್ತಾಯಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ