ಪೆನ್‌ ಡ್ರೈವ್ ಪ್ರಕರಣದಲ್ಲಿ ಡಿಕೆಶಿಯದ್ದಾಗಲಿ, ನನ್ನದಾಗಲಿ ಪಾತ್ರವಿಲ್ಲ: ಸಿಎಂ ಸಿದ್ದರಾಮಯ್ಯ - Mahanayaka

ಪೆನ್‌ ಡ್ರೈವ್ ಪ್ರಕರಣದಲ್ಲಿ ಡಿಕೆಶಿಯದ್ದಾಗಲಿ, ನನ್ನದಾಗಲಿ ಪಾತ್ರವಿಲ್ಲ: ಸಿಎಂ ಸಿದ್ದರಾಮಯ್ಯ

cm siddaramaiah
10/05/2024


Provided by

ಮೈಸೂರು:  ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಪೆನ್‌ ಡ್ರೈವ್ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರದ್ದಾಗಲಿ ಅಥವಾ ನನ್ನದಾಗಲಿ ಪಾತ್ರವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಸ್ಪಷ್ಟಪಡಿಸಿದ್ದಾರೆ.

ಇಲ್ಲಿನ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಎಸ್‌ ಐಟಿಗೆ ವಹಿಸಿದ್ದೇವೆ.

ನನಗೆ ನಮ್ಮ ಪೊಲೀಸರ ಬಗ್ಗೆ ವಿಶ್ವಾಸವಿದೆ. ಅವರು ಕಾನೂನು ಪ್ರಕಾರ ತನಿಖೆ ಮಾಡಿ ವರದಿ ಸಲ್ಲಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದರು.

ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಒತ್ತಾಯ ಕೇಳಿಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಒಂದೇ ಒಂದು ಪ್ರಕರಣವನ್ನೂ ಸಿಬಿಐಗೆ ವಹಿಸಿರಲಿಲ್ಲ. ಆಗ, ಬಿಜೆಪಿಯವರು ಸಿಬಿಐ ಅನ್ನು ಕರಪ್ಶನ್‌ ಬ್ಯೂರೊ ಆಫ್‌ ಇನ್‌ ವೆಸ್ಟಿಗೇಷನ್‌ ಎಂದು ಕರೆಯುತ್ತಿದ್ದರು. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು, ಚೋರ್‌ ಬಚಾವ್‌ ಸಂಸ್ಥೆ ಎಂದು ಕರೆಯುತ್ತಿದ್ದರು. ಈಗ ಇದ್ದಕ್ಕಿದ್ದಂತೆಯೇ ಅವರೆಲ್ಲರಿಗೂ ಸಿಬಿಐ ಬಗ್ಗೆ ಪ್ರೀತಿ ಬಂದುಬಿಟ್ಟಿದೆ. ಇದರ ಅರ್ಥವೇನು?’ ಎಂದು ತಿರುಗೇಟು ನೀಡಿದರು.

ಎಸ್‌ ಐಟಿಯವರು ತನಿಖೆ ನಡೆಸುತ್ತಿದ್ದಾರೆ. ಅದರಲ್ಲಿ ನಮ್ಮ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಅವರು ಸರಿಯಾದ ದಾರಿಯಲ್ಲಿ ತನಿಖೆ ಮಾಡುತ್ತಾರೆಂಬ ವಿಶ್ವಾಸವಿದೆ. ಕಾನೂನಿಗೆ ವಿರುದ್ಧವಾಗಿ ಮಾಡುವಂತೆ ಪೊಲೀಸರಿಗೆ ಹೇಳಿಲ್ಲ. ಹಿಂದೆಯೂ ಹೇಳಿರಲಿಲ್ಲ. ಅಂತರರಾಷ್ಟ್ರೀಯ ಮಟ್ಟದ ವ್ಯಾಪ್ತಿಗೆ ಬರುವ ಪ್ರಕರಣ ಇದೇನಲ್ಲ. ಬಿಜೆಪಿ ಹಾಗೂ ಜೆಡಿಎಸ್‌ನವರಿಗೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲವೇ? ಅಪರಾಧ ಪ್ರಕರಣಗಳನ್ನು ತನಿಖೆ ನಡೆಸುವವರಾರು?’ ಎಂದು ಕೇಳಿದರು.

‘ನಾವು ಡಿ.ಕೆ. ರವಿ, ಲಾಟರಿ, ಜಾರ್ಜ್‌, ಪರೇಶ್‌ ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು. ಅವೆಲ್ಲವೂ ಏನಾದವು? ಒಂದಾದರೂ ಶಿಕ್ಷೆ ಆಗಿದೆಯೇ? ಹಾಗೆಂದು ಸಿಬಿಐ ಮೇಲೆ ನನಗೆ ನಂಬಿಕೆ ಇಲ್ಲ ಎನ್ನುವುದಿಲ್ಲ. ಆದರೆ, ನಮ್ಮ ಪೊಲೀಸರ ಮೇಲೆ ನಂಬಿಕೆ ಇದೆ’ ಎಂದು ಪ್ರತಿಕ್ರಿಯಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ