ಕೆಎಎಸ್ ಅಧಿಕಾರಿ ಪತ್ನಿ, ಹೈಕೋರ್ಟ್ ವಕೀಲೆ ಚೈತ್ರಾ ಸಾವಿಗೆ ಶರಣು: ಡೆತ್ ನೋಟ್ ನಲ್ಲಿ ಏನಿದೆ?

ಬೆಂಗಳೂರು: ಕೆಎಎಸ್ ಅಧಿಕಾರಿ ಶಿವಕುಮಾರ್ ಅವರ ಪತ್ನಿ, ವಕೀಲೆ ಚೈತ್ರಾ ಗೌಡ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಸಂಜಯ್ ನಗರದ ಮನೆಯಲ್ಲಿ ನಡೆದಿದೆ.
ಮನೆಯ ಬೆಡ್ ರೂಮ್ ನಲ್ಲಿ ಚೈತ್ರಾ ಗೌಡ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ. ಇನ್ನು ತಮ್ಮ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಸಾವಿಗೆ ಕಾರಣಗಳನ್ನು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಚೈತ್ರಾ ಅವರ ಮೃತದೇಹದ ಪಕ್ಕ ಸಿಕ್ಕಿರುವ ಡೆತ್ ನೋಟ್ ನಲ್ಲಿ ನನಗೆ ಜೀವನ ಸಾಕಾಗಿದೆ. I am just leaving ಎಂದು ಬರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಡೆತ್ ನೋಟ್ ನಲ್ಲಿ ಪತಿಯ ವಿರುದ್ಧವಾಗಲಿ, ಮತ್ಯಾರದ್ದೇ ವಿರುದ್ಧವಾಗಲಿ ಅವರು ದೂರಿಲ್ಲ ಎಂದು ಹೇಳಲಾಗಿದೆ. ಆದರೂ, ಪೊಲೀಸರು ಮನೆಯ ಸದಸ್ಯರನ್ನು ವಿಚಾರಣೆ ನಡೆಸಿದ್ದಾರೆ.
ಮಾರ್ಚ್ 11 ರಂದು ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ನಲ್ಲಿ ನನ್ನ ಗಂಡ ಒಳ್ಳೆಯವರು. ನನ್ನನ್ನು ಚನ್ನಾಗಿ ನೋಡಿಕೊಂಡಿದ್ದಾರೆ. ನನ್ನ ಸಾವಿಗೆ ಯಾರೂ ಕಾರಣವಲ್ಲ. ಆದರೆ ನಾನು ಜೀವನವನ್ನು ಕೊನೆಗೊಳಿಸಿಕೊಳ್ಳಲು ನಿರ್ಧರಿಸಿದ್ದೇನೆ. ನಾನು ಡಿಪ್ರೆಶನ್ ನಿಂದ ಬಳಲುತ್ತಿದ್ದೇನೆ . ಡಿಪ್ರೆಶನ್ ನಿಂದ ಹೊರಬರಲು ಸಾಕಷ್ಟು ಪ್ರಯತ್ನಿಸಿದೆ. ಆದರೂ ಸಾಧ್ಯವಾಗುತ್ತಿಲ್ಲ. ಹಾಗಾಗಿ ಜೀವನ ಎಂಡ್ ಮಾಡಿಕೊಳ್ಳುತ್ತಿದ್ದೇನೆ. ಆತ್ಮಹತ್ಯೆ ತಪ್ಪು ಎಂದು ಗೊತ್ತು. ಆದರೂ ಜೀವನ ಅಂತ್ಯಗೊಳಿಸಿಕೊಳ್ಳಲು ತೀರ್ಮಾನಿಸಿದ್ದೇನೆ. ಮಗುವನ್ನು ನೋಡಿಕೊಂಡು ಜೀವನ ಎಂಜಾಯ್ ಮಾಡಿ ಎಂದು ಬರೆದಿಟ್ಟಿದ್ದಾರೆ.
ಆತ್ಮಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿದ ಸಂಜಯ್ ನಗರ ಪೊಲೀಸರು, ಮೃತದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth