ಪಕ್ಷಕ್ಕೆ ದುಡಿದ ಅರ್ಹರ ಪಟ್ಟಿ ಹೈಕಮಾಂಡಿಗೆ ಸಲ್ಲಿಕೆ; ಯುವಕರು, ಹಿರಿಯರಿಗೆ ಅವಕಾಶ: ಡಿಸಿಎಂ ಡಿ.ಕೆ.ಶಿವಕುಮಾರ್

ನವದೆಹಲಿ: ಪಕ್ಷಕ್ಕೆ ದುಡಿದ ಅರ್ಹರ ಪಟ್ಟಿಯನ್ನು ಹೈಕಮಾಂಡಿಗೆ ಸಲ್ಲಿಸಿದ್ದೇನೆ. ಒಂದು ಸುತ್ತಿನ ಸಭೆ ನಡೆದಿದ್ದು. ಎಐಸಿಸಿ ಅಧ್ಯಕ್ಷರು ಹಾಗೂ ಇತರರ ಜೊತೆ ಚರ್ಚೆ ನಡೆಸಿ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನ ಪರಿಷತ್ ಟಿಕೆಟ್ ಹಂಚಿಕೆ ವಿಚಾರವಾಗಿ ನವದೆಹಲಿಯಲ್ಲಿ ಮಂಗಳವಾರ ಸಂಜೆ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.
“ಎಲ್ಲಾ ಸಮಾಜಗಳಿಗು ಅವಕಾಶ ಮಾಡಿಕೊಡಬೇಕು. 300 ಕ್ಕೂ ಹೆಚ್ಚು ಜನ ಆಂಕಾಕ್ಷಿಗಳು ಇರುವ ಕಾರಣ ಒಂದಷ್ಟು ಜನರಿಗೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲಾ ವರ್ಗದವರಿಗೂ ಈ ಬಾರಿ ಅವಕಾಶ ಮಾಡಿಕೊಡಲು ಆಗಿಲ್ಲ” ಎಂದರು.
“ಪ್ರಾಥಮಿಕವಾಗಿ ಒಂದಷ್ಟು ಹೆಸರುಗಳನ್ನು ನಾವು ಸೂಚಿಸಿದ್ದೇವೆ. ಜೊತೆಗೆ ಸಚಿವರು, ಎಐಸಿಸಿ ಕಾರ್ಯದರ್ಶಿಗಳು ತಮ್ಮ ಆಯ್ಕೆಗಳನ್ನು ಶಿಫಾರಸ್ಸು ಮಾಡಿದ್ದಾರೆ. ಮುಂದಿನ ಎರಡು ವರ್ಷಗಳ ನಂತರ ಮತ್ತೊಮ್ಮೆ ಇದೇ ರೀತಿ ಅವಕಾಶ ಬರುವ ಕಾರಣ ಅವರಿಗೆಲ್ಲ ಮುಂದಿನ ಬಾರಿ ಸ್ಥಾನ ನೀಡಲಾಗುವುದು. ಈಗ ಏಳರಿಂದ- ಎಂಟು ಮಂದಿಗೆ ಅವಕಾಶ ಮಾಡಿ ಕೊಡಲಾಗುವುದು. ಪಕ್ಷ ಸಂಘಟನೆಗೆ ದುಡಿದವರಿಗೆ ಮೊದಲ ಆದ್ಯತೆ ನೀಡಲಾಗುವುದು” ಎಂದರು.
“ಪಕ್ಷ ಏನು ಹೇಳುತ್ತದೆ ಅದರಂತೆ ಕೇಳಬೇಕು. ನಮ್ಮ ಪಟ್ಟಿಯನ್ನು ನಾವು ಸಲ್ಲಿಸಿದ್ದೇವೆ. ಹೈಕಮಾಂಡ್ ಎಐಸಿಸಿ ಕಾರ್ಯದರ್ಶಿಗಳ ಬಳಿಯು ಪಟ್ಟಿ ತೆಗೆದುಕೊಳ್ಳುತ್ತದೆ. ಚುನಾವಣಾ ಸಮಯದಲ್ಲಿ ಕೆಲಸ ಮಾಡಿದವರು ಯಾರು, ಅವರ ಹಿನ್ನೆಲೆ, ತ್ಯಾಗ, ಶ್ರಮ ಪಟ್ಟಿರುವರ ಹೆಸರು ಹೈಕಮಾಂಡ್ ಗೆ ಸಲ್ಲಿಕೆಯಾಗುತ್ತದೆ. ಹಿರಿಯರು, ಯುವಕರು ಸೇರಿದ ಸಮತೋಲನದ ಪಟ್ಟಿಯನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ” ಎಂದು ತಿಳಿಸಿದರು.
ಕುಟುಂಬದವರಿಗೆ ಬೇಡ ಕಾರ್ಯಕರ್ತರಿಗೆ ನೀಡಿ ಎನ್ನುವ ಮಾತು ಕೇಳಿಬರುತ್ತಿದೆ ಎಂದಾಗ “ಯಾವ ಕುಟುಂಬದವರಿಗೂ ಇಲ್ಲ. ಶಾಸಕ ಸ್ಥಾನ ಬಿಟ್ಟು ಕೊಟ್ಟ ಕಾರಣಕ್ಕೆ, ಒಂದು ಸ್ಥಾನಕ್ಕೆ ಮಾತ್ರ ಈ ಮೊದಲು ಮಾತು ಕೊಟ್ಟಂತೆ ನೀಡಲಾಗುವುದು” ಎಂದರು.
ಯತೀಂದ್ರ ಅವರಿಗೆ ಕೊಡಲಾಗುತ್ತದೆಯೇ ಎಂದು ಮರು ಪ್ರಶ್ನಿಸಿದಾಗ “ನಿಮ್ಮ ಮಾತುಗಳನ್ನು ನಾನು ಕೇಳಲು ಆಗುವುದಿಲ್ಲ. ನಾವು ಕೆಲವರಿಗೆ ಮಾತು ಕೊಟ್ಟಿದ್ದೇವೆ. ಆ ಮಾತಿನಂತೆ ಕೆಲವೊಂದು ಸಂದರ್ಭದಲ್ಲಿ ನಡೆದುಕೊಳ್ಳಬೇಕಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ವಾಲ್ಮೀಕಿ ನಿಗಮದ ಅಧಿಕಾರಿಯ ಆತ್ಮಹತ್ಯೆ ಬಗ್ಗೆ ಕೇಳಿದಾಗ “ಈ ವಿಚಾರವಾಗಿ ತನಿಖೆ ನಡೆಸಲು ಈಗಾಗಲೇ ಸಿಎಂ ಮತ್ತು ಗೃಹ ಸಚಿವರು ಸೂಚನೆ ನೀಡಿದ್ದಾರೆ. ಅತ್ಯಂತ ಕೂಲಂಕಷವಾಗಿ ತನಿಖೆ ನಡೆಸಲಾಗುವುದು. ಈ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ” ಎಂದು ಹೇಳಿದರು.
ಮೇ 30 ರಂದು ಪ್ರಧಾನಿ ಮೋದಿ ಅವರ ಕನ್ಯಾಕುಮಾರಿ ಭೇಟಿ ಬಗ್ಗೆ ಕೇಳಿದಾಗ “ಅವರವರ ಧರ್ಮ, ನಂಬಿಕೆ, ಪೂಜೆ, ಪುನಸ್ಕಾರ ಎಲ್ಲವೂ ವೈಯಕ್ತಿಕವಾದುದು. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನಿಮಗೆ ಶಾಂತಿ ಹಾಗೂ ಹೆಚ್ಚಿನ ಶಕ್ತಿ ಸಂಪಾದಿಸಲು ಅವರವರ ಕೆಲಸ ಮಾಡುತ್ತಾರೆ. ಇದಕ್ಕೆಲ್ಲಾ ನಾವೇಕೆ ಮೂಗು ತೂರಿಸಬೇಕು” ಎಂದರು.
ದೇಶದ ಅಭಿವೃದ್ಧಿಗೆ ದೇವರು ನನ್ನ ಕಳುಹಿಸಿದ್ದಾರೆ ಎನ್ನುವ ಮೋದಿ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಈ ವಿಚಾರದ ಬಗ್ಗೆ ನಮ್ಮ ಪಕ್ಷ ಈಗಾಗಲೇ ಪ್ರತಿಕ್ರಿಯೆ ನೀಡಿದೆ. ನಾನು ಹೇಳುವುದೇನಿಲ್ಲ” ಎಂದು ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97
ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068