ಮೀನುಗಾರ ಕೋಮಿನ ಮೊಗೇರ ಜಾತಿಯವರಿಗೆ ಪ.ಜಾತಿ ಪ್ರಮಾಣ ಪತ್ರ ನೀಡುವುದಕ್ಕೆ ವಿರೋಧ

ಉತ್ತರ ಕನ್ನಡ: ಜಿಲ್ಲೆಯ ಮೀನುಗಾರ ಕೋಮಿಗೆ ಸೇರಿದ ಪ್ರವರ್ಗ-I ರಲ್ಲಿರುವ ಹಿಂದುಳಿದ ಜಾತಿಯ ಮೊಗೇರ ಜಾತಿಯವರಿಗೆ ಪ.ಜಾತಿಯ ಪ್ರಮಾಣ ಪತ್ರವನ್ನು ನೀಡಬಾರದು ಹಾಗೂ ಈ ಹಿಂದೆ ನೀಡಿದ ಪ.ಜಾತಿ ಪ್ರಮಾಣ ಪತ್ರ ಪಡೆದುಕೊಂಡ ಮೀನುಗಾರ ಮೊಗೇರರ ಪ.ಜಾತಿ ಪ್ರಮಾಣ ಪತ್ರಕ್ಕೆ ಸಿಂಧುತ್ವ ಪ್ರಮಾಣ ಪತ್ರವನ್ನು ನೀಡಬಾರದು ಮತ್ತು ಇವರೆಲ್ಲ ವಾಮ ಮಾರ್ಗದಿಂದ ಪಡೆದುಕೊಂಡಿರುವ ಆ ಎರಡೂ ಪ್ರಮಾಣ ಪತ್ರಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ದ.ಕ ಜಿಲ್ಲೆಯ ಪ.ಜಾತಿಯ ವಿವಿಧ ಸಂಸ್ಥೆಗಳ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಮಂಗಳೂರು ತಾಲೂಕು ತಹಶೀಲ್ದಾರ್‍ರವರ ಮೂಲಕ ಉ.ಕನ್ನಡ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖಾಧಿಕಾರಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಭಾರತ ಸರಕಾರವು ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರಿಂದ ರಚಿಸಲ್ಪಟ್ಟ ಸಂವಿಧಾನದನ್ವಯ ಅನುಚ್ಛೇದ 341ರ ಪ್ರಕಾರ ಕರ್ನಾಟಕ ರಾಜ್ಯ ಪ.ಜಾತಿಯ ಯಾದಿಯ ಕ್ರಮ ಸಂಖ್ಯೆ 78ರಲ್ಲಿ ಬರುವ ನೈಜ ಪ.ಜಾತಿಯ ಮೊಗೇರರು ಮತ್ತು ಪ.ಜಾತಿಯ ಸಂಘಟನೆಗಳು ಕಳೆದ 3 ದಶಕಗಳಿಂದಲೂ ಸುಳ್ಳು ಜಾತಿ ಪ್ರಮಾಣ ಪತ್ರದ ವಿರುದ್ಧ ಸಮರ್ಪಕ ಹಾಗೂ ಸಂಘಟಿತ ಹೋರಾಟ ಮಾಡುವುದರೊಂದಿಗೆ ಉ.ಕನ್ನಡ ಜಿಲ್ಲೆಯಲ್ಲಿ ಮೀನುಗಾರ ಮೊಗೇರರು ಪಡೆದುಕೊಳ್ಳುತ್ತಿದ್ದ ಪ.ಜಾತಿಯ ಪ್ರಮಾಣ ಪತ್ರಗಳಿಗೆ ತಡೆಯೊಡ್ಡಲು ಸಾಧ್ಯವಾಗಿದೆ. ಮಾತ್ರವಲ್ಲದೇ 2010 ರಿಂದ ಇವರಿಗೆ ಪ.ಜಾತಿಯ ಪ್ರಮಾಣ ಪತ್ರ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.
ಈ ಜಾತಿಯ ಜನರು ನ್ಯಾಯಾಲಯದಲ್ಲಿ ಸಲ್ಲಿಸಿದ ದೂರುಗಳು ಕೂಡಾ ವಜಾಗೊಂಡಿರುತ್ತದೆ. ಮೀನುಗಾರ ಕೋಮಿನ ವಿಘ್ನೇಶ್ವರ ಗುಂಡು ಮತ್ತು ದಿನಕರ ಬೈದಿನ ಮನೆ ಪ್ರಕರಣದಲ್ಲಿ ಉ.ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಪ್ರಮುಖ ಪ್ರತಿವಾದಿಗಳಾಗಿದ್ದು ಪ್ರಕರಣದಲ್ಲಿ ಪರಿಶಿಷ್ಟರ ಸಾಮಾಜಿಕ ನ್ಯಾಯಕ್ಕೆ ಗೆಲುವಾಗಿರುತ್ತದೆ.
ಮೊಗೇರ್ ಎಂಬ ಸಮಾನಾಂತರ ಜಾತಿ ಸೂಚಕ ಶಬ್ದದ ದುರುಪಯೋಗಪಡಿಸಿಕೊಂಡು ಬಂದಿರುವ ಇವರು ಪರಿಶಿಷ್ಟರ ಎಲ್ಲಾ ಮೀಸಲಾತಿ ಸೌಲಭ್ಯವನ್ನು ಕಬಳಿಸಿಕೊಂಡು ಬಂದಿರುವುದಲ್ಲದೆ ನಾಟಕೀಯ ಪ್ರತಿಭಟನೆಗಳ ಮೂಲಕ ಸರಕಾರದ ಮೇಲೆ ಪ್ರಭಾವವನ್ನು ಬೀರಿ ಪ.ಜಾತಿಯ ಪ್ರಮಾಣ ಪತ್ರ ಪಡೆಯಲು ಇನ್ನಿಲ್ಲದ ಕಸರತ್ತನ್ನು ಮಾಡುತ್ತಿರುವುದು ಗುಪ್ತವಾಗಿ ಉಳಿದಿಲ್ಲ. ಈ ವಿದ್ಯಾಮಾನಗಳನ್ನು ಅರಿತಿರುವ ಪರಿಶಿಷ್ಟ ಜಾತಿಯ ಸಂಘಟನೆಗಳು ತಮ್ಮ ಸಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಹೋರಾಟವನ್ನೂ ನಡೆಸಲು ತೀರ್ಮಾನಿಸಿದೆ. ಅದರಂತೆ ಉ.ಕನ್ನಡ ಜಿಲ್ಲೆಯಲ್ಲಿ ಪ.ಜಾತಿಯವರಲ್ಲದ ಮೀನುಗಾರ ಕೋಮಿನ ಮೊಗೇರರು ಪ.ಜಾತಿ ಪ್ರಮಾಣ ಪತ್ರ ಮತ್ತು ಜಾತಿ ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಗಳನ್ನು ಸಾರಾಸಗಟ್ಟಾಗಿ ತಿರಸ್ಕರಿಸಬೇಕು ಹಾಗೂ ವಾಮ ಮಾರ್ಗದಿಂದ ಇವರುಗಳು ಪಡೆದುಕೊಂಡಿರುವ ಆ ಎರಡೂ ಪ್ರಮಾಣ ಪತ್ರಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪ.ಜಾತಿಯ ಸಂಘಟನೆಗಳು ಸೇರಿ ದ.ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ ಮತ್ತು ಮಂಗಳೂರು ತಾಲೂಕು ತಹಶೀಲ್ದಾರ್ ಮೂಲಕ ಉ.ಕನ್ನಡ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು ಜಾತಿ ಪರಿಶೀಲನಾ ಸಮಿತಿ ಮತ್ತು ಸಮಾಜ ಕಲ್ಯಾಣಾಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ ಜಾತಿ ಪರಿಶೀಲನಾ ಸಮಿತಿ ಉತ್ತರ ಕನ್ನಡ ಜಿಲ್ಲೆ ಇವರಿಗೆ ಮನವಿಯನ್ನು ಸಲ್ಲಿಸಿರುತ್ತಾರೆ.
ಈ ಸಂದರ್ಭದಲ್ಲಿ ಪ.ಜಾತಿಯ ಮುಖಂಡರುಗಳಾದ ಸುಂದರ ಮೇರ, ಸೀತಾರಾಮ್ ಕೊಂಚಾಡಿ, ಅಶೋಕ್ ಕೊಂಚಾಡಿ, ರಾಮ ಕೆ ಕಾಟಿಪಳ್ಳ, ಗೋಪಾಲ ಕೃಷ್ಣಾಪುರ, ರಾಮ ಕೊಳಂಬೆ, ಕೃಷ್ಣಪ್ಪ ಬೊಂದೇಲ್, ರತ್ನಾ ಕುಳಾಯಿ, ಸುಲೋಚನಾ ಕುಳಾಯಿ, ರಮೇಶ್ ಕೋಟ್ಯಾನ್, ಸುಧಾಕರ್ ಬೋಳೂರು, ಶೇಖರ್ ಚಿಲಿಂಬಿ, ನಾಗೇಶ್ ಬಲ್ಮಠ, ಕಿರಣ್ ಕುಮಾರ್ ಕೊಡಿಯಲ್ ಬೈಲ್ ದಿನೇಶ್ ಕಾಪಿಕಾಡು, ಕುಮಾರ್ ಇಡ್ಯಾ ಮುಂತಾದವರು ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97