ತೈಲ ಬೆಲೆ ಏರಿಕೆ ಜತೆ ತರಕಾರಿ ಸೇರಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ: ಜನರು ಹೈರಾಣು - Mahanayaka

ತೈಲ ಬೆಲೆ ಏರಿಕೆ ಜತೆ ತರಕಾರಿ ಸೇರಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ: ಜನರು ಹೈರಾಣು

20/06/2024


Provided by

ಪೆಟ್ರೋಲ್, ಡಿಸೇಲ್, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಎರಡು ವಾರಗಳ ಹಿಂದೆ ಪ್ರತಿ ಕೆಜಿ ಟೊಮೆಟೊ ₹25 ರಿಂದ ₹30ರ ಆಸುಪಾಸಿನಲ್ಲಿತ್ತು. ಇದೀಗ, ₹100ರ ಗಡಿ ದಾಟಿದೆ. ಮೂರು ತಿಂಗಳಲ್ಲಿ ಈರುಳ್ಳಿ ಬೆಲೆಯೂ ಏರಿಕೆ ಆಗುವ ಸಾಧ್ಯತೆ ಇದೆ. ಹೂವಿನ ಬೆಲೆ ಪ್ರತಿ ದಿನ ದುಬಾರಿಯಾಗುತ್ತಲೇ ಇದೆ.

ಮುಂಗಾರು ಮಳೆ ಚುರುಕು ಪಡೆಯುತ್ತಿದ್ದಂತೆ ಜಿಲ್ಲೆಯಾದ್ಯಂತ ಎಲ್ಲಾ ತರಕಾರಿ ಪದಾರ್ಥಗಳ ಬೆಲೆ ಏಕಾಏಕಿ ಗಗನಕ್ಕೇರಿದೆ. ಈ ವರ್ಷ ವಾಡಿಕೆಯಂತೆ ಮಳೆಯಾಗದೇ, ತಾಪಮಾನ ಹೆಚ್ಚಳವಾಗಿತ್ತು. ಮಳೆಯಿಲ್ಲದೇ ರೈತರು ಕಂಗಾಲಾಗಿದ್ದರು. ಬೆಳೆದ ಬೆಳೆ ಕೈಗೆ ಸಿಗದೇ ಪರದಾಡಿದ್ದರು. ಇನ್ನು ಹವಾಮಾನ ವೈಪರೀತ್ಯದಿಂದ ಬೆಳೆ ನಾಶವಾಗಿದೆ. ಟೊಮೆಟೊ ಬೆಲೆ ಏರಿಕೆಗೆ ಕೀಟಗಳ ಸಮಸ್ಯೆ, ಬೆಂಕಿ ರೋಗದ ಸಮಸ್ಯೆಯೂ ಕಾರಣವಾಗುತ್ತಿದೆ. ಉತ್ತಮ ಇಳುವರಿಯೂ ಈ ಬಾರಿ ಇಲ್ಲವಾಗಿದೆ.

ಈ ವರ್ಷ ಟೊಮೆಟೊ ಬೆಳೆಯುವುದಕ್ಕೆ ಹೋದವರು ಕೂಡ ಕೈ ಸುಟ್ಟುಕೊಂಡಿದ್ದರು. ಇದೀಗ ಮಳೆ ಆರಂಭವಾಗಿದ್ದು, ಟೊಮೆಟೊ ಬೆಳೆಯಲಾಗುತ್ತಿದೆ. ಆದರೆ, ಮಳೆ ಸರಿಯಾದ ಸಮಯಕ್ಕೆ ಬರದ ಪರಿಣಾಮ ಬೆಳೆ ಸರಿಯಾಗಿ ಬಂದಿಲ್ಲ. ಹೀಗಾಗಿ ಕರ್ನಾಟಕದಿಂದ ಬರುತ್ತಿದ್ದ ಟೊಮೆಟೊ ಬೆಳೆ ಕಡಿಮೆಯಾಗಿದೆ. ಈ ಹಿಂದೆ ಕೋಲಾರ, ಹೊಸಕೋಟೆ, ನಾಸಿಕ್, ಮಹಾರಾಷ್ಟ್ರ, ತಮಿಳುನಾಡು ಭಾಗದಿಂದ ಟೊಮೆಟೊ ಬರುತ್ತಿತ್ತು. ಸದ್ಯ ನಾಸಿಕ್​ನಿಂದ ಮಾತ್ರ ಟೊಮೆಟೊ ಸರಬರಾಜಾಗುತ್ತಿದೆ.

ಟೊಮೆಟೊಗೆ ಸದ್ಯ ಬೇಡಿಕೆಯೂ ಕೂಡ ಜಾಸ್ತಿ ಇದೆ. ಬೇಡಿಕೆಗೆ ಸರಿಯಾಗಿ ಟೊಮೆಟೊ ಪೂರೈಕೆಯಾಗುತ್ತಿಲ್ಲ. ಇದರ ಪರಿಣಾಮ ಬೆಲೆ ಏರಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ ಸದ್ಯ ಒಂದು ಕೆಜಿ ಟೊಮೆಟೊ ಬೆಲೆ‌ ₹105 ಇದ್ದು, ಇನ್ನು ಒಂದು ವಾರದಲ್ಲಿ ₹150ರ ಗಡಿದಾಟುವ ಸಾಧ್ಯತೆ ಇದೆ.‌ ಮಾರುಕಟ್ಟೆಗಳಲ್ಲಿ ₹100 ಇದ್ದರೆ, ಹಾಪ್ ಕಾಮ್ಸ್​ಗಳಲ್ಲಿ ₹105 ಬೆಲೆ ನಿಗದಿ ಮಾಡಲಾಗಿದೆ.

“ಟೊಮೆಟೊ ಬೆಲೆ ಏಕಾಏಕಿ ಜಿಗಿದಿದೆ. ಎರಡು ವಾರಗಳ ಹಿಂದೆ ಪ್ರತಿ ಕೆ.ಜಿ ಟೊಮೆಟೊ ₹25 ರಿಂದ ₹30ರ ಆಸುಪಾಸಿನಲ್ಲಿತ್ತು. ನಾಲ್ಕೈದು ದಿನಗಳ ಹಿಂದೆ ಮಧ್ಯಮ ಗಾತ್ರದ ಗುಣಮಟ್ಟದ ಟೊಮೆಟೊ ಪ್ರತಿ ಕೆ.ಜಿಗೆ ₹40 ರಿಂದ ₹50 ಇತ್ತು. ಈಗ ಒಂದೇ ಮಟ್ಟಿಗೆ ₹100 ರಿಂದ ₹120ಕ್ಕೆ ಏರಿಕೆ ಕಂಡಿದೆ. ದಿನ ಕಳೆದಂತೆ ಇದು ಇನ್ನೂ ಹೆಚ್ಚಾಗಲಿದೆ. ಇನ್ನು ಒಂದು ತಿಂಗಳ ಕಾಲ ಟೊಮೆಟೊ ಬೆಲೆ‌ ಇದೇ ರೀತಿಯಾಗಿ ಮುಂದುವರಿಯಲಿದೆ” ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಕಳೆದೊಂದು ತಿಂಗಳಿಂದ ಬೀನ್ಸ್‌ ದರ ಯಥಾಸ್ಥಿತಿಯಲ್ಲಿದೆ. ಪ್ರತಿ ಕೆಜಿ ಬೀನ್ಸ್‌ ₹180 ರಿಂದ ₹200ಕ್ಕೆ ಮಾರಾಟ ಮಾಡಲಾಗುತ್ತಿದೆ. ಬಹುತೇಕ ಎಲ್ಲ ತರಕಾರಿಗಳ ಬೆಲೆ ಪ್ರತಿ ಕೆಜಿಗೆ ₹80ರಿಂದ ₹100ರ ಆಸುಪಾಸಿನಲ್ಲಿದೆ. ಮಧ್ಯಮ ಗಾತ್ರದ ಒಂದು ಕಟ್ಟು ಮೆಂತೆ ಪಲ್ಯ ₹40ಕ್ಕೆ ಮಾರಾಟವಾದರೆ, ಪಾಲಕ್‌, ಸಬ್ಬಕ್ಕಿ ₹30ರಿಂದ ₹40ರ ಆಸುಪಾಸಿನಲ್ಲಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ