ಆರ್.ಎಂ.ಆರ್. ಹಳ್ಳಿಕಾರ್ ಫೌಂಡೇಷನ್ ಟ್ರಸ್ಟ್ ವತಿಯಿಂದ ಹಳ್ಳಿಕಾರ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಬೆಂಗಳೂರು: ಆರ್. ಎಂ. ಆರ್. ಹಳ್ಳಿಕಾರ್ ಫೌಂಡೇಷನ್ ಟ್ರಸ್ಟ್ ವತಿಯಿಂದ ಭಾನುವಾರ, ಬೆಂಗಳೂರು, ಜಯನಗರ 2ನೇ ಬ್ಲಾಕ್ ನಲ್ಲಿರುವ ಕಮ್ಯೂನಿಟಿ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಸಭಾಂಗಣದಲ್ಲಿ ಹಳ್ಳಿಕಾರ್ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇಕಡ 90 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ರೂಗಳ ವಿದ್ಯಾರ್ಥಿವೇತನ ನೀಡುವ ಮೂಲಕ ವಿದ್ಯಾರ್ಥಿಗಳ ಜೊತೆಗೆ ಪೋಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆರ್.ಎಂ.ಆರ್.ಹಳ್ಳಿಕಾರ್ ಫೌಂಡೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಎಂ. ನಾಗರಾಜ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣನವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ರವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ನಿರ್ದೇಶಕರು ಮತ್ತು ಸಾಹಿತಿಗಳಾದ ಕಾ.ತ. ಚಿಕ್ಕಣ್ಣನವರು, ಜಯನಗರ ಕೋ–ಆಪರೇಟಿವ್ ಹೌಸಿಂಗ್ ಸೊಸೈಟಿಯ ಲಿಮಿಟೆಡ್ ಅಧ್ಯಕ್ಷರಾದ ಬಿ.ಆರ್.ವಾಸುದೇವರವರು, ಕಮ್ಯುನಿಟಿ ಸೆಂಟರ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಚಿಕ್ಕಯ್ಯನವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಆಯೋಜಕರು ಮತ್ತು ಆರ್.ಎಂ.ಆರ್.ಹಳ್ಳಿಕಾರ್ ಫೌಂಡೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಎಂ. ನಾಗರಾಜ್ ರವರು ಹಳ್ಳಿಕಾರ ಸಮುದಾಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಳೆದ ಎರಡು ವರ್ಷಗಳಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಡಿಪ್ಲೋಮೋ, ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಶೇಕಡ 80 ಕ್ಕಿಂತ ಹೆಚ್ಚು ಅಂಕಗಳಿಸಿದ ಹಾಗೂ ಕ್ರೀಡೆ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗಣ್ಯರ ಸಮ್ಮುಖದಲ್ಲಿ, ಪ್ರತಿಭಾ ಪುರಸ್ಕಾರ ನೀಡಿ ಅವರ ಪೋಷಕರೊಂದಿಗೆ ಸನ್ಮಾನಿಸುತ್ತಾ ಬಂದಿದ್ದಾರೆ. ಕಳೆದ 2022-23ನೇ ಸಾಲಿನಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಟ್ರಸ್ಟ್ ನ ಪ್ರಯೋಜನವನ್ನು ಪಡೆದಿದ್ದರು.
ಸಮುದಾಯದ ಹಿರಿಯ ಮುಖಂಡರು ಮತ್ತು ಆರ್.ಎಂ.ಆರ್. ಹಳ್ಳಿಕಾರ್ ಫೌಂಡೇಷನ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಕೆ.ಎಂ.ನಾಗರಾಜ್ ರವರು ಸಮುದಾಯದ ಯುವ ಸಮೂಹಕ್ಕೆ ಉನ್ನತ ಶಿಕ್ಷಣ ದೊರಕಿಸುವ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ, ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳಿಗೆ ತರಬೇತಿಯನ್ನು ಕೊಡಿಸುವ, ಸಮುದಾಯವನ್ನು ಅಭಿವೃದ್ಧಿ ಪಥದ ಕಡೆಗೆ ಮುನ್ನಡೆಸಲು ಅವರ ತಂದೆ ತಾಯಿ ದಿ. ರಂಗಮ್ಮ ಮತ್ತು ದಿ.ಮುನಿರಂಗಪ್ಪನವರ ಹೆಸರಿನಲ್ಲಿ ಆರ್.ಎಂ.ಆರ್. ಹಳ್ಳಿಕಾರ್ ಫೌಂಡೇಷನ್ ಟ್ರಸ್ಟ್ ನ್ನು ಸ್ಥಾಪಿಸಿ ಸಮುದಾಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಕಾರವನ್ನು ನೀಡುತ್ತಾ ಬರುತ್ತಿದ್ದಾರೆ. ಹಳ್ಳಿಕಾರ್ ಸಮುದಾಯವು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾತ್ರ ತಮ್ಮ ನೆಲೆಯನ್ನು ಹೊಂದಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತು ಅಲ್ಪ ಪ್ರಮಾಣದಲ್ಲಿ ಅರೆನಗರ–ನಗರ ಪ್ರದೇಶಗಳಲ್ಲಿ ಬಂದು ನೆಲೆಸಿ ಸಿಕ್ಕ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿರುವ ಸಮುದಾಯದ ಮಕ್ಕಳಿಗೆ ಶಿಕ್ಷಣದ ನೆರವನ್ನು ನೀಡುತ್ತಾ ಬರುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97