ರೀಲ್ಸ್ ಹುಚ್ಚಿಗೆ ರಸ್ತೆಯಲ್ಲಿ ಬೈಕ್ ವೀಲ್ಹಿಂಗ್: ಉಜಿರೆ ಮೂಲದ ಐವರು ಯುವಕರು ಪೊಲೀಸ್ ವಶಕ್ಕೆ - Mahanayaka

ರೀಲ್ಸ್ ಹುಚ್ಚಿಗೆ ರಸ್ತೆಯಲ್ಲಿ ಬೈಕ್ ವೀಲ್ಹಿಂಗ್: ಉಜಿರೆ ಮೂಲದ ಐವರು ಯುವಕರು ಪೊಲೀಸ್ ವಶಕ್ಕೆ

chikkamagaluru
15/07/2024


Provided by

ಚಿಕ್ಕಮಗಳೂರು: ಪ್ರವಾಸಕ್ಕೆ ಬಂದು ಹಳ್ಳಿ ರಸ್ತೆಯಲ್ಲಿ ವೀಲಿಂಗ್ ಮಾಡಿ ಸುಮಾರು ಐದು ಕಿಲೋ ಮೀಟರ್ ರಸ್ತೆಯನ್ನು ಹಾಳು ಮಾಡಿರುವ ಮಂಗಳೂರು ಮೂಲದ ಐವರು ರೋಡ್ ರೋಮಿಯೋ ಗಳಿಗೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸರು ಕಾನೂನಿನ ಪಾಠ ಮಾಡಿದ್ದಾರೆ.

ವಾರಾಂತ್ಯದ ಹಿನ್ನೆಲೆ ನಿನ್ನೆ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಪ್ರವಾಸಿತಾಣ ರಾಣಿ ಝರಿ ಜಲಪಾತಕ್ಕೆ ಬಂದಿದ್ದ ಐವರು ಸ್ನೇಹಿತರು ರೀಲ್ಸ್ ಮಾಡೋ ಹುಚ್ಚಿಗೆ ಹಳ್ಳಿಯ 5 ಕಿ.ಮೀ. ರಸ್ತೆಯನ್ನ ಹಾಳು ಮಾಡಿದ್ದರು.

ಒಬ್ಬರಾದ ಮೇಲೊಬ್ಬರಂತೆ ಇವರು ಯುವಕರು ವಿಡಿಯೋ ಹಾಗೂ ಫೋಟೋ ಚೆನ್ನಾಗಿ ಬರಲೆಂದು 5 ಕಿ.ಮೀ ರಸ್ತೆಯಲ್ಲಿ ಸುಮಾರು ನೂರಕ್ಕೂ ಅಧಿಕ ಬಾರಿ ಓಡಾಡಿದ್ದರು. ಇದರಿಂದ, ರಾಣಿಝರಿಯ ಮಣ್ಣಿನ ರಸ್ತೆ ಕೆಸರು ಗದ್ದೆಯಾಗಿತ್ತು. ಮಂಗಳೂರು ಯುವಕರಾಗಿ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸರು ಇವರು ಯುವಕರನ್ನು ಠಾಣೆಗೆ ಕರೆಸಿ ಕಾನೂನಿನ ಪಾಠ ಮಾಡಿದ್ದಾರೆ.

ಮಂಗಳೂರಿನ ಉಜಿರೆ ಮೂಲದ ಗಿರೀಶ್, ಗಣೇಶ್, ಗಣೇಶ್ ಕುಮಾರ್, ಪ್ರವೀಣ್ ಹಾಗೂ ರೋಹಿತ್ ಬಂಧಿತ ಆರೋಪಿಗಳು. ರಸ್ತೆಯಲ್ಲಿ ವೀಲಿಂಗ್ ಮಾಡಿದ್ದ 5 ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರ್ಕಶ ಶಬ್ಧದೊಂದಿಗೆ ಓಡಾಟ ಹಾಗೂ ಸಾರ್ವಜನಿಕ ರಸ್ತೆಯನ್ನು ಹಾಳು ಮಾಡಿದ ಹಿನ್ನೆಲೆ ಐವರ ವಿರುದ್ಧವು ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡಿಗೆರೆ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆ ಅಬ್ಬರಕ್ಕೆ ಜಲಪಾತಗಳಿಗೆ ಜೀವಕಳೆ ಬಂದಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಆದರೆ, ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರು ರಸ್ತೆ, ಜಲಪಾತ, ಪ್ರಕೃತಿ ಹಾಗೂ ಧಾರ್ಮಿಕ ಕ್ಷೇತ್ರಗಳ ಬಳಿಯೂ ಬೇಕಾಬಿಟ್ಟಿಯಾಗಿ ವರ್ತಿಸುತ್ತಿರುವುದು ಪ್ರವಾಸಿಗರು ಹಾಗೂ ಪೊಲೀಸರಿಗೂ ತಲೆನೋವು ತರಿಸಿದೆ.

ನೂರು ಪ್ರವಾಸಿ ತಾಣಗಳಿದ್ದರೆ ಎಲ್ಲಾ ಜಾಗದಲ್ಲಿಯೂ ಪೊಲೀಸರು ಕಾವಲಿರುವುದು ಅಸಾಧ್ಯ. ಪ್ರವಾಸಿಗರೇ ಅರ್ಥ ಮಾಡಿಕೊಂಡು ನಡೆಯಬೇಕಿದೆ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾದರೂ ಆಶ್ಚರ್ಯವಿಲ್ಲ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ