ಜೈಲಲ್ಲಿ ಹೀಗೆ ನಡೆಯುತ್ತಿರುವುದು ಇದು ಮೊದಲಾ?: ದರ್ಶನ್ ಬಗ್ಗೆ ಕೇಳಿದ ಪ್ರಶ್ನೆಗೆ ಸುಮಲತಾ ಹೇಳಿದಿಷ್ಟು! - Mahanayaka
11:05 AM Thursday 21 - August 2025

ಜೈಲಲ್ಲಿ ಹೀಗೆ ನಡೆಯುತ್ತಿರುವುದು ಇದು ಮೊದಲಾ?: ದರ್ಶನ್ ಬಗ್ಗೆ ಕೇಳಿದ ಪ್ರಶ್ನೆಗೆ ಸುಮಲತಾ ಹೇಳಿದಿಷ್ಟು!

sumalatha
27/08/2024


Provided by

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಹಾಗೂ ಇತರರಿಗೆ ರಾಜಾತಿಥ್ಯ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯದ ಮಾಜಿ ಸಂಸದೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಸಂಸದೆ ಸುಮಲತಾ ಅವರ ಹುಟ್ಟುಹಬ್ಬವಾಗಿತ್ತು. ಹೀಗಾಗಿ ಅವರು ಅಂಬರೀಶ್ ಸ್ಮಾರಕಕ್ಕೆ ನಮಿಸಿದರು. ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ದರ್ಶನ್ ನಮಗೆ ಆಪ್ತರು, ನಾನು ಮಾತನಾಡಿದರೆ ವಿವಾದ ಆಗುತ್ತೆ. ಆದರೆ ಎಲ್ಲರಿಗೂ ಗೊತ್ತಿರುವ ವಿಚಾರವೆಂದರೆ, ಜೈಲಲ್ಲಿ ಹೀಗೆ ನಡೆಯುತ್ತಿರುವುದು ಇದು ಮೊದಲಾ? ಈಗ ದರ್ಶನ್ ಪ್ರಕರಣದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಮಾಧ್ಯಮಗಳು ಈ ಮುಂಚೆ ಏಕೆ ಕೇಳಲಿಲ್ಲ? ಎಂದು ಪ್ರಶ್ನೆ ಮಾಡಿದರು.

ಐಪಿಎಸ್ ಅಧಿಕಾರಿ ರೂಪಾ ಅವರು ಈ ಮೊದಲು ಸಹ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಜೈಲಿನಲ್ಲಿ ನಡೆಯುತ್ತಿರುವ ಅವ್ಯಹಾರಗಳನ್ನು ಬಯಲು ಮಾಡಿದ್ದರು. ಆಗ ನೀವು ಸಹ ಪ್ರಶ್ನೆ ಮಾಡಿರಲಿಲ್ಲ ಏಕೆ? ಎಂದು ಮಾಧ್ಯಮಗಳನ್ನು ಪ್ರಶ್ನಿಸಿದರು.

‘ಯಾರೇ ಜೈಲಿನಲ್ಲಿ ಬಂಧಿಗಳಿದ್ದರೂ ಸ್ವಲ್ಪ ಹಣ ಖರ್ಚು ಮಾಡಿದರೆ ಎಲ್ಲವೂ ಸಿಗುತ್ತದೆ, ಪರಪ್ಪನ ಅಗ್ರಹಾರ ಮಾತ್ರವಲ್ಲ, ಪ್ರತಿ ಜೈಲಿನಲ್ಲಿಯೂ ಇದು ನಡೆಯುತ್ತಿದೆ. ಇದು ಗುಟ್ಟೇನೂ ಅಲ್ಲ. ಅಮೆರಿಕ ಜೈಲಿನಲ್ಲಿ, ಮೊಬೈಲ್ ಫೋನ್, ಸಿಗರೇಟು, ಡ್ರಗ್ಸ್ ಸಹ ಸಿಗುತ್ತೆ’ ಎಂದಿದ್ದಾರೆ. ಮುಂದುವರೆದು ಮಾತನಾಡಿ, ‘ಈಗ ನಡೆದಿರುವುದು ಸರಿಯಲ್ಲ, ಆದರೆ ಇದು ಭ್ರಷ್ಟಾಚಾರ. ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವಿದು. ಆದರೆ ನೀವು ಒಬ್ಬ ವ್ಯಕ್ತಿಯನ್ನು ಯಾಕೆ ಗುರಿ ಮಾಡಿಕೊಳ್ಳುತ್ತಿದ್ದೀರಿ? ಪ್ರಶ್ನೆ ಮಾಡಬೇಕಿರುವುದು, ಜೈಲಿನ ಅಧಿಕಾರಿಗಳನ್ನು, ಇಲಾಖೆಯನ್ನು, ಜೈಲು ವ್ಯವಸ್ಥೆಯನ್ನು ಸರಿಮಾಡಬೇಕಾದುದು ಸಚಿವಾಲಯ ಜವಾಬ್ದಾರಿ ಎಂದು ಸಹ ಸುಮಲತಾ ಹೇಳಿದ್ದಾರೆ.

ಇನ್ನೂ ಜೈಲಿನಲ್ಲಿ ರೌಡಿಶೀಟರ್ ಗಳ ಜೊತೆ ನಟ ದರ್ಶನ್ ಒಡನಾಟದ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಅವರು, ಜೈಲಿನಲ್ಲಿ ಒಳ್ಳೆಯವರು ಇರುತ್ತಾರಾ? ಅವರು ಇನ್ಯಾರನ್ನು ಮಾತನಾಡಿಸಬೇಕು ಅಂತ ಮರು ಪ್ರಶ್ನೆ ಹಾಕಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ