ಸುವರ್ಣಸೌಧದೊಳಗೆ "ಅನುಭವ ಮಂಟಪ"ದ ವೈಭವ: ಇತಿಹಾಸದ ಮರುಸೃಷ್ಟಿ - Mahanayaka

ಸುವರ್ಣಸೌಧದೊಳಗೆ “ಅನುಭವ ಮಂಟಪ”ದ ವೈಭವ: ಇತಿಹಾಸದ ಮರುಸೃಷ್ಟಿ

anubhava mantapa
08/12/2024


Provided by

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್  ಅವರ ನೇತೃತ್ವದಲ್ಲಿ, ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುವ  ಮತ್ತೊಂದು ಐತಿಹಾಸಿಕ ಕ್ಷಣವು, ಬೆಳಗಾವಿಯ ಸುವರ್ಣ ಸೌಧದಲ್ಲಿ ದಾಖಲಾಗಲಿದೆ.   ವಿಶ್ವಗುರು ಶ್ರೀ ಬಸವಣ್ಣನವರು  ಸ್ಥಾಪಿಸಿದ, “ವಿಶ್ವದ ಮೊದಲ ಸಂಸತ್ತು”  ಎಂಬ ಖ್ಯಾತಿಯ, “ಅನುಭವ ಮಂಟಪದ” ಬೃಹತ್ ತೈಲವರ್ಣ ಚಿತ್ರ ಅನಾವರಣವು ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ, ಚಳಿಗಾಲ ಅಧಿವೇಶನದ ಮೊದಲ ದಿನದಂದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಲಿದ್ದಾರೆ.

ಕ್ಯಾನ್ವಾಸ್ ಮೇಲೆ ತೈಲ ಮಾಧ್ಯಮದ ಮೂಲಕ ರಚಿಸಲ್ಪಟ್ಟ 20 ಅಡಿ ಉದ್ದ ಮತ್ತು 10 ಅಡಿ ಅಗಲದ ಈ ವಿಶೇಷ ಚಿತ್ರಕ್ಕೆ  ಜೀವಂತಿಗೆ ಮತ್ತು ನೈಜತೆ ತುಂಬಿದವರು, ಬಿ.ಎಲ್. ಶಂಕರ್ ನೇತೃತ್ವದಲ್ಲಿ, ಪ್ರಖ್ಯಾತ ಕಲಾವಿದರಾದ —  ಬೆಂಗಳೂರು ಚಿತ್ರಕಲಾ ಪರಿಷತ್ ನ ಸತೀಶ್ ರಾವ್  ಶಿವಮೊಗ್ಗ,  ಶ್ರೀಕಾಂತ್ ಹೆಗಡೆ ಸಿದ್ದಾಪುರ,  ಶೇಷಾದ್ರಿಪುರಂ ಕೆನ್ ಸ್ಕೂಲ್ ಕಲಾಶಾಲೆಯ ಅಶೋಕ್ ಯು,  ಜಗಳೂರು ರಾಜಾ ರವಿವರ್ಮ ಕಲಾಶಾಲೆಯ ರೂಪಾ ಎಂ.ಆರ್,   ವೀರಣ್ಣ ಮಡಿವಾಳಪ್ಪ ಬಬ್ಲಿ, ಬೈಲಹೊಂಗಲ ಮತ್ತು ಮಹೇಶ ನಿಂಗಪ್ಪ, ದಫಲಾಪುರ, ಜಮಖಂಡಿ ಅವರು.

ಮೊದಲ ಸಭಾಧ್ಯಕ್ಷರಾದ ಅಲ್ಲಮಪ್ರಭು ಅವರ  ಮುಂದಾಳುತ್ವದಲ್ಲಿ   ಅಜರಾಮರ ಚಿಂತನೆಗಳನ್ನು ಮತ್ತು ಅನನ್ಯ ತತ್ತ್ವಜ್ಞಾನವನ್ನು ಪ್ರತಿಬಿಂಬಿಸಿದ ಈ ಪವಿತ್ರ ವೇದಿಕೆಯು,  ಕೇವಲ ಶರಣ ಚಿಂತನೆಗಳ ಕೇಂದ್ರವಾಗಿರದೆ,  ಸಮಸ್ತ ಮನುಕುಲದ ಏಳಿಗೆಗೆ ಶಾಶ್ವತ ಆದರ್ಶಗಳನ್ನು ನೀಡಿ,  ಮಾನವೀಯತೆ ಮತ್ತು  ಸಮಾನತೆಯ ಮಹಾನ್  ಸಂದೇಶವನ್ನು ಸಮಸ್ತ ವಿಶ್ವಕ್ಕೆ ತೋರಿಸಿಕೊಟ್ಟ  ಶಕ್ತಿ ಕೇಂದ್ರವಾಗಿತ್ತು.   ಇದು ಸರ್ವಜಾತಿ, ಧರ್ಮಗಳ ಶರಣರನ್ನು ಸ್ವೀಕರಿಸಿದ ಪವಿತ್ರ ತಾಣವಾಗಿದ್ದು, ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ, ಸಿದ್ದರಾಮೇಶ್ವರ, ಮಡಿವಾಳ ಮಾಚಿದೇವ, ದೋಹರ ಕಕ್ಕಯ್ಯ, ಮೇದಾರ ಕೇತಯ್ಯ, ಬಹುರೂಪಿ ಚೌಡಯ್ಯ, , ಕೇತಲದೇವಿ, ದುಗ್ಗಳೆ, ಕಾಳವ್ವ  ಮೊದಲಾದ ಶರಣರ ದಿವ್ಯ ಚಿಂತನೆಯನ್ನು ಮತ್ತು  ಅನುಭವಗಳನ್ನು ಜಗತ್ತಿಗೆ ಪರಿಚಯಿಸಿದ ಪುಣ್ಯ ಸ್ಥಳವಾಗಿದೆ.

ಬೆಳಗಾವಿ ಸುವರ್ಣಸೌಧದಲ್ಲಿ ಸೋಮವಾರ,  ಡಿಸೆಂಬರ್ 9,  2024ರಂದು,  ಬೆಳಿಗ್ಗೆ 10:30ಕ್ಕೆ  ನಡೆಯುವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯ ಅತಿಥಿಯಾಗಿರುವರು. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಹಾಗೂ ವಿರೋಧಪಕ್ಷದ ನಾಯಕ ಆರ್. ಅಶೋಕ್  ಅವರು ಉಪಸ್ಥಿತರಿದ್ದು, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ