ಮೂಡಿಗೆರೆ ತಾಲೂಕು ಕಛೇರಿ ಸುತ್ತ ಪ್ಲಾಸ್ಟಿಕ್ ಕಸದ ರಾಶಿ: ಸಾರ್ವಜನಿಕರ ಆಕ್ರೋಶ

ಮೂಡಿಗೆರೆ: ತಾಲೂಕು ಆಡಳಿತ ಸೌಧದ ಸುತ್ತಮುತ್ತ ಪ್ಲಾಸ್ಟಿಕ್ ಹಾಗೂ ಇತರ ಕಸದ ರಾಶಿಗಳು ತುಂಬಿ ಹೋಗಿದ್ದು, ಸ್ಥಳೀಯರು ಹಾಗೂ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನನಿತ್ಯ ನೂರಾರು ಜನರು ಕಚೇರಿಗೆ ಆಗಮಿಸುತ್ತಾರೆ, ಆದರೆ ಸ್ವಚ್ಛತೆ ಮತ್ತು ಕಸ ನಿರ್ವಹಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ.
ಹಸಿರು ಫೌಂಡೇಶನ್ ಅಧ್ಯಕ್ಷ ರತನ್ ಊರುಬಗೆ ಈ ಕುರಿತು ಮಾತನಾಡಿ, “ತಾಲೂಕು ಕಚೇರಿ ಹತ್ತಿರವೇ ಇಂತಹ ಪರಿಸ್ಥಿತಿ ಕಂಡು ಬಂದರೆ, ಬೇರೆಲ್ಲ ಕಡೆಗಳಲ್ಲಿ ಹೇಗಿರಬಹುದು? ಅಧಿಕಾರಿಗಳು ಕೇವಲ ತಮ್ಮ ಕೆಲಸ ಮುಗಿಸಿ ಹೊರಡುವುದರಲ್ಲೇ ಆಸಕ್ತಿ ಹೊಂದಿದ್ದು, ಪರಿಸರ ಸ್ವಚ್ಛತೆಗೆ ಯಾವುದೇ ಗಮನ ಕೊಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರು ಕೂಡ ಅಧಿಕಾರಿಗಳಿಗೆ ಒತ್ತಾಯಿಸಿ, ಕೂಡಲೇ ಕಸದ ರಾಶಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ. ಸ್ವಚ್ಚತಾ ಅಭಿಯಾನವನ್ನು ನಿರಂತರವಾಗಿ ಕೈಗೊಳ್ಳುವಂತೆ ಹಾಗೂ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
ನಾವು ನೀವು ಹೊಣೆಗಾರರು: ಜಿಲ್ಲಾಡಳಿತ, ಪುರಸಭೆ ಹಾಗೂ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ತಕ್ಷಣ ಕ್ರಮ ತೆಗೆದುಕೊಂಡು, ಪರಿಸರವನ್ನು ಸ್ವಚ್ಛವಾಗಿಡಲು ಜವಾಬ್ದಾರಿವಹಿಸಬೇಕಾಗಿದೆ. ಇಲ್ಲದಿದ್ದರೆ, ಪರಿಸರವನ್ನು ಕಾಯ್ದುಕೊಳ್ಳಲು ನಾಗರಿಕರು ಮುನ್ನಡೆದುಕೊಂಡು ಸ್ವಚ್ಛತಾ ಹೋರಾಟ ಆರಂಭಿಸುವ ಸಾಧ್ಯತೆ ಇದೆ.
ತಕ್ಷಣ ಕಸದ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ ನಿಯಂತ್ರಣ, ಹಾಗೂ ಹೊಣೆಗಾರ ಅಧಿಕಾರಿಗಳ ಜವಾಬ್ದಾರಿ ನಿಗದಿಪಡಿಸುವುದು ಅಗತ್ಯ!
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7