ನಿನ್ನೆ ಐಸಿಯುನಲ್ಲಿದ್ದ ರಮೇಶ್ ಜಾರಕಿಹೊಳಿ ಕೇಸು ದಾಖಲಾದ ತಕ್ಷಣ ಡಿಸ್ಚಾರ್ಜ್! - Mahanayaka

ನಿನ್ನೆ ಐಸಿಯುನಲ್ಲಿದ್ದ ರಮೇಶ್ ಜಾರಕಿಹೊಳಿ ಕೇಸು ದಾಖಲಾದ ತಕ್ಷಣ ಡಿಸ್ಚಾರ್ಜ್!

ramesh jarakiholi in icu
07/04/2021

ಬೆಳಗಾವಿ: ಎರಡು ದಿನಗಳ ಹಿಂದೆಯಷ್ಟೇ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಇಂದು ಬೆಳಗ್ಗೆ ತಾಲೂಕು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಏಪ್ರಿಲ್ 10ರಂದು ರಾತ್ರಿ ರಮೇಶ್ ಜಾರಕಿಹೊಳಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದು, ಇದರಿಂದಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗಿತ್ತು. ಬಿ.ಪಿ., ಶುಗರ್ ಹೆಚ್ಚಳವಾಗಿದ್ದರಿಂದ ಐಸಿಯುನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿತ್ತು. ಆದರೆ ಈಗ ಬಿಪಿ, ಶುಗರ್ ನಿಯಂತ್ರಣಕ್ಕೆ ಬಂದಿದ್ದರಿಂದ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ರಮೇಶ್ ಜಾರಕಿಹೊಳಿಗೆ ಮನೆಯಲ್ಲಿಯೇ ಕ್ವಾರಂಟೈನ್ ಆಗಲು ವೈದ್ಯಾಧಿಕಾರಿ ಡಾ.ರವೀಂದ್ರ ಅವರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಪಿಪಿಇ ಕಿಟ್ ಧರಿಸಿ ಐಸಿಯುನಲ್ಲಿದ್ದ ರಮೇಶ್ ಜಾರಕಿಹೊಳಿ ಏಕಾಏಕಿ ಡಿಸ್ಚಾರ್ಜ್ ಆಗಿದ್ದಾರೆ. ಇಷ್ಟೊಂದು ಗಂಭೀರವಾಗಿದ್ದ ಅವರು ಏಕಾಏಕಿ ಇಷ್ಟು ಸುಧಾರಿಸಲು ಹೇಗೆ ಸಾಧ್ಯವಾಯಿತು? ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

ಇನ್ನೂ ರಮೇಶ್ ಜಾರಕಿಹೊಳಿಗೆ ಕೊರೊನಾ ಬಂದಿರುವ ಬಗ್ಗೆ ನಮಗೆ ಅನುಮಾನವಿದೆ. ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುವ ನಾಟಕವಾಡಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಪರ ವಕೀಲರಾದ ಕೆ.ಎನ್.ಜಗದೀಶ್ ಕುಮಾರ್ ಮತ್ತು ವಕೀಲ ಸೂರ್ಯ ಮುಕುಂದರಾಜ್ ಬೆಂಗಳೂರು ಅವರು  ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ನಿನ್ನೆಯಷ್ಟೇ ದೂರು ನೀಡಿದ್ದರು. ದೂರು ನೀಡಿದ ಮರುದಿನವೇ ರಮೇಶ್ ಜಾರಕಿಹೊಳಿ ಆಸ್ಪತ್ರೆಯಿಂದ ಹೊರ ಹೋಗಿದ್ದಾರೆ. ಇವುಗಳನ್ನು ಗಮನಿಸಿದಾಗ ವಕೀಲರ ಊಹೆ ನಿಜವಾಗಿರಬಹುದು ಎಂಬ ನಂಬಿಕೆ ಸಾರ್ವಜನಿಕರಲ್ಲಿಯೂ ಗಟ್ಟಿಯಾಗಿದೆ.

ರಮೇಶ್ ಜಾರಕಿಹೊಳಿ ಸಚಿವ ಡಾ.ಸುಧಾಕರ್ ಅವರಿಗೆ ಆತ್ಮೀಯ ಗೆಳೆಯರಾಗಿದ್ದಾರೆ.  ಹೀಗಾಗಿ ಸರ್ಕಾರಿ ವೈದ್ಯರ ಮೇಲೆ ಪ್ರಭಾವ ಬೀರಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುವ ನಾಟಕವಾಡಿದ್ದಾರೆ. ಹೀಗಾಗಿ ನುರಿತ ವೈದ್ಯರ ತಂಡದಿಂದ ಪರಿಶೀಲನೆ ನಡೆಸಬೇಕು. ಈ ಬಗ್ಗೆ ಹೈಕೋರ್ಟ್ ಪ್ರಕರಣದ ವರದಿ ಕೇಳಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ತಮ್ಮ ಪ್ರಭಾವ ಬಳಸಿ ರಮೇಶ್ ಜಾರಕಿಹೊಳಿ ದಿಕ್ಕುತಪ್ಪಿಸುವ ಪ್ರಯತ್ನ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನಿನ್ನೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಇತ್ತೀಚಿನ ಸುದ್ದಿ