ಹಸುವನ್ನು ಕೊಂದು ಹಾಕಿದ ವ್ಯಾಘ್ರ: ಮಿತಿಮೀರಿದ ಕಾಡುಪ್ರಾಣಿಗಳ ಉಪಟಳ!

ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದೆ. ಕಾಡಾನೆ, ಕಾಡುಕೋಣಗಳ ಉಪಟಳದ ನಡುವೆ ಇದೀಗ ಮೂಡಿಗೆರೆ ಪಟ್ಟಣದ ಸಮೀಪವೇ ಹಸುವೊಂದನ್ನು ಹುಲಿ ಕೊಂದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಮೂಡಿಗೆರೆ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಕುನ್ನಹಳ್ಳಿ ಗ್ರಾಮದಲ್ಲಿ ಹುಲಿದಾಳಿಗೆ ಹಸು ಬಲಿಯಾಗಿದೆ. ಕುನ್ನಹಳ್ಳಿ ಗ್ರಾಮದ ಕೃಷಿಕ ಹಳೇಮೂಡಿಗೆರೆ ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್.ಶಿವಾನಂದ ಅವರ ಭತ್ತದ ಗದ್ದೆಯಲ್ಲಿ ಭಾನುವಾರ ಹಸುವೊಂದರ ಕಳೆಬರ ಪತ್ತೆಯಾಗಿತ್ತು. ಪರಿಶೀಲಿಸಲಾಗಿ ಅದು ಗ್ರಾಮದ ಕೆ.ಸಿ.ಪ್ರದೀಪ್ ಎಂಬುವವರ ಸಿಂಧಿ ಹಸುವಾಗಿತ್ತು. ಸ್ಥಳದಲ್ಲಿ ಹುಲಿ ಹೆಜ್ಜೆ ಹೋಲುವ ಗುರುತುಗಳು ಕಂಡಬಂದಿದ್ದರಿಂದ ಅನುಮಾನಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಮೂಡಿಗೆರೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪಶುಸಂಗೋಪನಾ ಇಲಾಖೆ ವೈದ್ಯರು ಆಗಮಿಸಿ ಪರಿಶೀಲನೆ ನಡೆಸಿದಾಗ ಇದು ಹುಲಿ ಹೆಜ್ಜೆ ಎಂಬುದು ಖಚಿತವಾಗಿದ್ದು, ಹುಲಿದಾಳಿಯಿಂದ ಹಸು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಹಸುವಿನ ಕುತ್ತಿಗೆ ಭಾಗದಲ್ಲಿ ಹುಲಿದಾಳಿ ಮಾಡಿರುವ ಗುರುತು ಪತ್ತೆಯಾಗಿದೆ. ಪಶುಸಂಗೋಪನಾ ಇಲಾಖೆ ವೈದ್ಯರು ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಸ್ಥಳದಲ್ಲಿ ಅರಣ್ಯ ಇಲಾಖೆ ವತಿಯಿಂದ ಕ್ಯಾಮರ ಅಳವಡಿಸಿದ್ದು, ಹುಲಿಯ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕಲು ಪ್ರಯತ್ನಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮೂಡಿಗೆರೆ ಆರ್ ಎಫ್ ಓ ಕಾವ್ಯ, ಡೆಪ್ಯೂಟಿ ಆರ್.ಎಫ್.ಓ. ಅಶ್ವಥ್, ಬೀಟ್ ಫಾರೆಸ್ಟ್ ಸುಮಂತ್, ಶಿವಶಂಕರ್, ಗ್ರಾಮದ ಮುಖಂಡ ರವಿ ಕುನ್ನಹಳ್ಳಿ ಮುಂತಾದವರು ಉಪಸ್ಥಿತರಿದ್ದರು.
ಹುಲಿದಾಳಿಗೆ ಹಸು ಬಲಿಯಾಗಿರುವ ಘಟನೆ ಈ ಭಾಗದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಭಾಗ ಹೆಚ್ಚಿನ ಜನವಸತಿ ಪ್ರದೇಶವಾಗಿದ್ದು, ಕೃಷಿಕರು ಮತ್ತು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ತೋಟದ ಮಾಲೀಕರು ಮತ್ತು ಕಾರ್ಮಿಕರು ಜಮೀನುಗಳಿಗೆ ತೆರಳಲು ಭಯಪಡುವಂತಾಗಿದೆ. ಅರಣ್ಯ ಇಲಾಖೆ ತಕ್ಷಣ ಕ್ರಮವಹಿಸಿ ಹುಲಿಯನ್ನು ಪತ್ತೆಹಚ್ಚಿ ಸೆರೆಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD