ಚಲಿಸುತ್ತಿದ್ದ ಕಾರಿನಲ್ಲಿ ಬಾಲಕಿಯ ಮೇಲೆ ಗ್ಯಾಂಗ್ ರೇಪ್: ಬಾಲಕಿಯ ಸ್ನೇಹಿತೆಯನ್ನು ರಸ್ತೆಗೆಸೆದು ಕೊಲೆ

ಬುಲಂದ್ ಶಹರ್: ಚಲಿಸುತ್ತಿದ್ದ ಕಾರಿನಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ, ಆಕೆಯ ಸ್ನೇಹಿತೆಯನ್ನು ಕಾರಿನಿಂದ ಹೊರ ತಳ್ಳಿ ಹತ್ಯೆ ನಡೆಸಲಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕೆಲಸ ನೀಡುವ ನೆಪದಲ್ಲಿ ಬಾಲಕಿ ಹಾಗೂ ಆಕೆಯ ಸ್ನೇಹಿತೆಯನ್ನು ಗ್ರೇಟರ್ ನೋಯ್ಡಾ ನಿವಾಸಿ ಸಂದೀಪ್ ಮತ್ತು ಅಮಿತ್ ಹಾಗೂ ಗಾಜಿಯಾಬಾದ್ ನಿವಾಸಿ ಗೌರವ್ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಕಾರಿನಲ್ಲಿದ್ದವರು ಕಿರುಕುಳ ನೀಡಲು ಆರಂಭಿಸಿದ ವೇಳೆ ಗಲಾಟೆ ನಡೆದಿದ್ದು, ಮೀರತ್ ಜಿಲ್ಲೆ ವ್ಯಾಪ್ತಿಯಲ್ಲಿ ಒಬ್ಬಾಕೆಯನ್ನು ಕಾರಿನಿಂದ ಹೊರ ತಳ್ಳಲಾಗಿದೆ. ನಂತರ ಇನ್ನೊಬ್ಬಳ ಮೇಲೆ ಕಾರಿನಲ್ಲೇ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ.
ಮೀರತ್ ನಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಬುಲಂದ್ ಶಹರ್ ಜಿಲ್ಲೆ ಖುರ್ಜಾ ಬಳಿ ತಲುಪಿದ ವೇಳೆ ಸಂತ್ರಸ್ತ ಬಾಲಕಿ ಆರೋಪಿಗಳಿಂದ ತಪ್ಪಿಸಿಕೊಂಡು ಪರಾರಿಯಾಗಿ, ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಕಿಯಾ ಸೆಲ್ಟೋಸ್ ಕಾರನ್ನು ಅಲಿಘರ್—ಬುಲಂದ್ ಶಹರ್ ಹೆದ್ದಾರಿ ಬಳಿ ತಡೆದಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಆರೋಪಿಗಳು ದಾಳಿಗೆ ಮುಂದಾದಾಗ ಗೌರವ್ ಮತ್ತು ಸಂದೀಪ್ ನ ಕಾಲಿಗೆ ಗುಂಡು ಹಾರಿಸಿ ಹಿಡಿಯಲಾಗಿದೆ. ಆರೋಪಿಗಳ ಬಳಿ ಎರಡು ಪಿಸ್ತೂಲ್ ಹಾಗೂ ಜೀವಂತ ಗುಂಡುಗಳು ಪತ್ತೆಯಾಗಿವೆ.
ಕೆಲಸ ನೀಡುವುದಾಗಿ ನಂಬಿಸಿ ಇಬ್ಬರು ಬಾಲಕಿಯರನ್ನು ಲಕ್ನೋಗೆ ಕರೆದೊಯ್ಯುವುದಾಗಿ ಕಾರಿನಲ್ಲಿ ತೆರಳಿದ್ದರು. ನಡುವೆ ಬಿಯರ್ ಖರೀದಿಸಿ ಕುಡಿದಿದ್ದು, ನಂತರ ಕಿರುಕುಳ ನೀಡಲು ಮುಂದಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬುಧವಾರ ಖುರ್ಜಾ ಪೊಲೀಸ್ ಠಾಣೆಯಲ್ಲಿ ಭಾರತ್ ನ್ಯಾಯ ಸಂಹಿತಾ ಸಂಬಂಧಿತ ವಿಭಾಗದಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD