ಕೆರೆಗೆ ಬಿದ್ದಿದ್ದ ಜಿಂಕೆಯನ್ನ ರಕ್ಷಿಸಿದ ಮೂಡಿಗೆರೆಯ ಮರ್ಕಲ್ ಗ್ರಾಮದ ಯುವಕರು - Mahanayaka

ಕೆರೆಗೆ ಬಿದ್ದಿದ್ದ ಜಿಂಕೆಯನ್ನ ರಕ್ಷಿಸಿದ ಮೂಡಿಗೆರೆಯ ಮರ್ಕಲ್ ಗ್ರಾಮದ ಯುವಕರು

deer
04/06/2025


Provided by

ಕೊಟ್ಟಿಗೆಹಾರ: ಕೆರೆಗೆ ಬಿದ್ದು ಮೇಲೆ ಏಳಲಾಗದೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಜಿಂಕೆಯನ್ನ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದ ಯುವಕರು ರಕ್ಷಿಸಿ ಅರಣ್ಯ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.

ಮರ್ಕಲ್ ಗ್ರಾಮದಲ್ಲಿ ಕೆರೆಗೆ ಬಿದ್ದಿದ್ದ ಜಿಂಕೆಯನ್ನ ಕಂಡು ನಾಯಿಗಳು ತೀವ್ರವಾಗಿ ಬೊಗಳುತ್ತಿದ್ದವು. ಜಿಂಕೆ ನಾಯಿಗಳ ಕೈಗೆ ಸಿಕ್ಕಿದ್ದರೆ ಬಹುಶಃ ನಾಯಿಗಳ ದಾಳಿಗೆ ತುತ್ತಾಗುತ್ತಿತ್ತು. ಆದರೆ, ಗಾಬರಿಯಿಂದ ಓಡುವಾಗ ಆಯತಪ್ಪಿ ಕೆರೆಗೆ ಬಿದ್ದಿತ್ತು.

ಕೆರೆಗೆ ಬಿದ್ದ ಜಿಂಕೆಯನ್ನು ಕಂಡು ಜಿಂಕೆಯನ್ನ ಸುತ್ತುವರಿದು ನಾಯಿಗಳು ಬೊಗಳುತ್ತಿದ್ದವು. ಇದನ್ನು ಗಮನಿಸಿದ ಮರ್ಕಲ್ ಗ್ರಾಮದ ಪ್ರಶಾಂತ್, ಜೈಪಾಲ್, ಶಶಿ, ಸವಿನ್ ಹಾಗೂ ಹಾಲಪ್ಪ ಎಂಬ ಯುವಕರು ಕೆರೆಗೆ ಇಳಿದು ಜಿಂಕೆಗೆ ಹಗ್ಗ ಕಟ್ಟಿ ನಾಯಿಗಳನ್ನು ಓಡಿಸಿ ಜಿಂಕೆಯನ್ನು ಮೇಲೆ ಎಳೆದು ರಕ್ಷಿಸಿದ್ದಾರೆ. ಗಾಬರಿಯಿಂದ ಏದುಸಿರು ಬಿಡುತ್ತಿದ್ದ ಜಿಂಕೆಗೆ ಆಹಾರ ನೀಡಿ ಸಂತೈಸಿದ್ದಾರೆ.

ಬಳಿಕ ಅರಣ್ಯ ಅಧಿಕಾರಿಗಳಿಗೆ ಫೋನ್ ಮಾಡಿ ಜಿಂಕೆಯನ್ನು ಕಾಡಿಗೆ ಬಿಡುವಂತೆ ಅರಣ್ಯ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಮರ್ಕಲ್ ಗ್ರಾಮದ ಯುವಕರ ಈ ಕೆಲಸಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.

ಇತ್ತೀಚೆಗೆ ಮೂಡಿಗೆರೆ ತಾಲೂಕಿನ ಹಳ್ಳಿಯೊಂದರಲ್ಲಿ ನಾಡಿಗೆ ಬಂದಿದ್ದ ಜಿಂಕೆಯನ್ನ ನಾಯಿಗಳು ಅಟ್ಟಾಡಿಸಿದ್ದವು. ಆಗಲು ಸ್ಥಳೀಯ ಯುವಕರು ಜಿಂಕೆಯನ್ನ ರಕ್ಷಿಸಿ ಅರಣ್ಯ ಅಧಿಕಾರಿಗಳ ವಶಕ್ಕೆ ನೀಡಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ